

ಚಿತ್ರದುರ್ಗ: ಅನಿಷ್ಠ ಪದ್ಧತಿಗಳಾದ ಬಾಲ ಕಾರ್ಮಿಕ, ಬಾಲ್ಯವಿವಾಹಗಳನ್ನು ತೊಡೆದು ಹಾಕಲು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ,ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್, ಶಿಕ್ಷ ಣ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕರ ಯೋಜನಾ ಸೊಸೈಟಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿಯಲ್ಲಿ ಆಯೋಜಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶದ ಹೋಟೆಲ್, ಮೆಕಾನಿಕ್ ಶಾಪ್‌ಗಳು, ಅಂಗಡಿ ಮುಂಗಟ್ಟು, ಕಾರ್ಖಾನೆಗಳಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಜಾಗೃತಿ ಉಂಟಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಕೊರತೆಯಿದೆ. ಅಲ್ಲಿ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
ಸರ್ಕಾರ 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ, ಕಡ್ಡಾಯ ಶಿಕ್ಷಣ ನೀಡುತ್ತಿದೆ. ನಂತರದ ವಿದ್ಯಾರ್ಥಿ ವೇತನ, ಹಾಸ್ಟೆಲ್ ಸೌಲಭ್ಯ ಕಲ್ಪಿಸಿದೆ. ಹೀಗಿದ್ದರೂ ಜಿಲ್ಲೆಯಲ್ಲಿ ಮಕ್ಕಳ ಗೈರು ಹಾಜರಿ ಹೆಚ್ಚಾಗಿದೆ. ಇದು ಶೈಕ್ಷಣಿಕ ಫಲಿತಾಂಶ ಕುಸಿತ, ಬಾಲ ಕಾರ್ಮಿಕ, ಬಾಲ್ಯವಿವಾಹ ಮತ್ತಿತರ ಅನಿಷ್ಠ ಪದ್ದತಿಗಳಿಗೆ ಕಾರಣವಾಗಿದೆ.
ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣಕ್ಕೆ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಗ್ರಾಮೀಣ ಸಮಿತಿ ರಚಿಸಲಾಗಿದೆ. ಕ್ಷೇತ್ರ ಮಟ್ಟದ ಅಧಿಕಾರಿಗಳು ಮಕ್ಕಳ ಮಾಹಿತಿ ಹೊಂದಿರಬೇಕು. ಬಾಲ ಕಾರ್ಮಿಕ ಹಾಗೂ ಬಾಲ್ಯ ವಿವಾಹಗಳನ್ನು ತಡೆಯಲು ಪ್ರಯತ್ನಿಸಬೇಕು ಎಂದರು.
ಪಾಲಕರು ಬಲವಂತವಾಗಿ ಮಕ್ಕಳನ್ನು ದುಡಿಮೆಗೆ ದೂಡುವುದು ಹಾಗೂ ಅವರ ವಿವಾಹಕ್ಕೆ ಮುಂದಾಗುವುದು ಸಲ್ಲದು. ಓದಿಗೆ ಪ್ರೋತ್ಸಾಹಿಸಬೇಕು. ಮಕ್ಕಳ ಹಕ್ಕುಗಳನ್ನು ಕಸಿಯಬಾರದು. ಇಟ್ಟಿಗೆ ಬಟ್ಟಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕುಟುಂಬಗಳ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕೆಂದರು. ಪ್ರತಿಜ್ಞಾವಿಧಿ ಬೋಧಿಸಿದರು.
ಜಿಪಂ ಡಿಎಸ್ ರಂಗಸ್ವಾಮಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ಹೋಗಲಾಡಿಸಲು ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಸುಧಾರಣೆ ಮುಖ್ಯವಾಗಿದೆ. ಶೈಕ್ಷಣಿಕ ಪ್ರಗತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯ. ಆರ್ಥಿಕವಾಗಿ ಕುಟುಂಬಗಳು ಸ್ವಾವಲಂಬಿಯಾಗುತ್ತವೆ. ಇದರಿಂದ ಅನಿಷ್ಠ ಪದ್ಧತಿಗಳು ದೂರವಾಗುತ್ತವೆ ಎಂದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ನಟರಾಜ್ ಉಪನ್ಯಾಸ ನೀಡಿದರು. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ಪ್ರೌಢಶಾಲೆ ಮಕ್ಕಳಿಗೆ ಏರ್ಪಡಿಸಿದ್ಧ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ, ಪ್ರಮಾಣ ಪತ್ರ ವಿತರಿಸಲಾಯಿತು.
ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಬಿ.ಎನ್. ಸುಮಿತಾ ರಾಘವೇಂದ್ರ, ಡಿಡಿಪಿಐ ಎಂ.ಆರ್. ಮಂಜುನಾಥ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಭಾರತಿ ಆರ್. ಬಣಕಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ. ಸವಿತಾ, ಕಾರ್ಮಿಕ ಅಧಿಕಾರಿ ಅನಿಲ ಬಿ. ಬಗಟಿ, ಕಾರ್ಮಿಕ ನಿರೀಕ್ಷಕ ಪಿ. ಭೀಮೇಶ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ. ಸತೀಶ್ ಕುಮಾರ್ ಮತ್ತಿತರರು ಇದ್ದರು.
ಜಾಗೃತಿ ಜಾಥಾ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಿಂದ ಒನಕೆ ಓಬವ್ವ ವೃತ್ತದವರೆಗೆ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಚಾಲನೆ ನೀಡಿದರು. ಅಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ರಚಿಸಿ, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಸೇವೆ ಪಡೆಯುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದರು.