ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನವಾಗಲಿ

12rajesh7
Published on

ಚಾಮರಾಜನಗರ: ನಗರದ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗದಲ್ಲಿ ಕಲಾವಿದರು ಮತ್ತು ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಅವರನ್ನು ಗುರುತಿಸುವಂತಹ ಕೆಲಸಗಳು ಹೆಚ್ಚಾಗಬೇಕು ಎಂದು ಕೊಳ್ಳೇಗಾಲ ಚೇತನವನ ಬುದ್ಧ ವಿಹಾರದ ಮನೋರಖ್ಖಿತ ಭಂತೇಜಿ ಸಲಹೆ ನೀಡಿದರು.

ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಕನಸು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ರಂಗಭೂಮಿ ಕಾರ್ಯಾಗಾರ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊಹಚ್ಚಲು ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೇ ಇತ್ತೀಚೆಗೆ ನಾಟಕ ಕಲೆ ಕಣ್ಮರೆಯಾಗುತ್ತಿದೆ. ಅಲ್ಲಲ್ಲಿ ಇಂತಹ ಪ್ರಯತ್ನಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಕಲಾಪ್ರವೃತ್ತಿಯನ್ನು ಹಾಗೂ ಆಸಕ್ತಿಯನ್ನು ಬೆಳೆಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಅರಹಂತಕ ಅಂಗುಲಿಮಾಲ ನಾಟಕವನ್ನು ಮಾಡಿಸುವುದೇ ಒಂದು ದೊಡ್ಡ ಉತ್ತಮವಾದ ಪ್ರಯತ್ನವಾಗಿದೆ. ಅದರಲ್ಲೂ ಚಿಕ್ಕ ಮಕ್ಕಳು ನಾಟಕವನ್ನು ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಬುದ್ಧನ ಚಿಂತನೆಗಳು ಅತ್ಯಂತ ಸಹಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಕನಸು ಸಾಂಸ್ಕೃತಿಕ ಟ್ರಸ್ಟ್ ಈ ಪ್ರಯತ್ನ ಮಾಡಿರುವುದು ಎಲ್ಲರೂ ಮೆಚ್ಚುವಂತಹ ನಡೆಯಾಗಿದೆ ಎಂದರು.

ಕನಸು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಮಕ್ಕಳನ್ನು ಹೆಚ್ಚಾಗಿ ರಂಗಭೂಮಿಗೆ ತೊಡಗಿಸುವ ನಿಟ್ಟನಲ್ಲಿ ಟ್ರಸ್ಟ್ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ಮಕ್ಕಳಲ್ಲಿ ನಾಟಕ, ರಂಗಗೀತೆ ಹಾಗೂ ಇನ್ನಿತರೆ ಕಲೆಯನ್ನು ಮೈಗೂಡಿಸುವ ನಿಟ್ಟನಲ್ಲಿ ಕೆಲಸ ಮಾಡಲಾಗುತ್ತಿದೆ. ಕಲೆ ಮತ್ತು ಕಲಾವಿದರನ್ನು ಹಾಗೂ ರಂಗಭೂಮಿಯನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಎಸ್.ಆರ್.ಪರುಶುರಾಮಪ್ಪ ರಚನೆಯ ಅರಹಂತಕ ಅಂಗುಲಿಮಾಲ ಎಂಬ ನಾಟಕವನ್ನು ಮಕ್ಕಳು ಪ್ರದರ್ಶನ ಮಾಡಿದರು. ಅದಲ್ಲದೇ ರಂಗಗೀತೆ, ಹೋರಾಟದ ಗೀತೆ, ಬುದ್ಧಗೀತೆ ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯರಾಮ್, ಸಾಹಿತಿ ಡಾ.ಬಿ.ಆರ್.ಕೃಷ್ಣಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ್, ನಾಗರಾಜು, ಕುಂಭಯ್ಯ, ಪ್ರಭುಸ್ವಾಮಿ, ಗ್ರಾ.ಪಂ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ಸೋಮಣ್ಣ, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಪುಟ್ಟರಾಜು, ದೈಹಿಕ ಶಿಕ್ಷಣ ಶೀಕ್ಷಕ ನಾರಾಯಣ್, ನಂಜುಂಡಯ್ಯ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net