

ಚಾಮರಾಜನಗರ: ಹನೂರು ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೆ.28 ರಂದು ಆಚರಿಸಲು ನಿರ್ಧರಿಸಿರುವ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಸಕ ಆರ್.ನರೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಸೋಮವಾರ ಗ್ರಾಮೀಣ ದಸರಾ ಆಚರಣೆ ಸಂಬಂಧ ಆಯೋಜಿಸಿದ್ದ ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ಗ್ರಾಮೀಣ ದಸರಾವನ್ನು ಆಯೋಜಿಸಲು ಅವಕಾಶ ಇರಲಿಲ್ಲ. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಸೂಚನೆಯ ಮೇರೆಗೆ ತಾಲೂಕು ಕೇಂದ್ರಗಳಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಸಹಕರಿಸುವುದರ ಮೂಲಕ ಅಗತ್ಯ ಜವಾಬ್ದಾರಿಯನ್ನು ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಸಂಪತ್‌ಕುಮಾರ್, ಹರೀಶ್‌ಕುಮಾರ್, ತಹಸೀಲ್ದಾರ್ ಆನಂದಯ್ಯ, ಬಿಇಒ ಶಿವರಾಜು, ತಾಪಂ ಇಒ ಶ್ರೀನಿವಾಸ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದರಮ್ಮ, ಕೃಷಿ ಅಧಿಕಾರಿ ರಘುವೀರ್, ಸೆಸ್ಕ್ ಎಇಇ ಶಂಕರ್, ಪಿಡಬ್ಯುಡಿ ಎಇಇ ರಾಜೇಶ್ ಮುನ್ಸಿ, ಪಪಂ ಮುಖ್ಯಾಧಿಕಾರಿ ಪರಶಿವಯ್ಯ, ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಇತರರು ಇದ್ದರು.