ಆಲೂರು: ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದು ರೆಡ್‌ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷ ಕೆ.ಎನ್.ಕಾಂತರಾಜ್ ಹೇಳಿದರು.
ಹಾಸನ ನಗರದ ಇಂಡಿಯಾನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ಹಾಸನ, ಭಾರತೀಯ ರೆಡ್ ಕ್ರಾಸ್ ಆಲೂರು ಘಟಕ, ಮಗ್ಗೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ದೈನಂದಿನ ಕೆಲಸದ ಒತ್ತಡದಲ್ಲಿದ್ದು, ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸಬೇಕು ಎಂದರು.
ಇಂಡಿಯಾನ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಎಸ್.ಬಿ.ನಿರೂಪ್ ಮಾತನಾಡಿ, ಗ್ರಾಮೀಣ ಹಾಗೂ ನಗರದ ಜನರಿಗೆ ಅರೋಗ್ಯದ ಬಗ್ಗೆ ಅರಿವು ಮೂಡಿಸಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕಾದ ಅನಿವಾರ್ಯತೆ ಇದೆ. ಅರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿ ಎಂದರು.
ಕೀಲು ಮತ್ತು ಮೂಳೆ ತಜ್ಞ ಡಾ. ನಯೀಮ್ ಸಿದ್ದಿಕ್, ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ಚಿತ್ರಾ ವೈ.ಭಟ್, ತಾಲೂಕು ರೆಡ್‌ಕ್ರಾಸ್ ಸಭಾಪತಿ ಕೆ.ಎನ್.ಕಾಂತರಾಜ್, ಕಾರ್ಯದರ್ಶಿ ವೀರಭದ್ರಸ್ವಾಮಿ, ಉಪಾಧ್ಯಕ್ಷ ಶಶಿಧರ್ ಬೆಕ್ಕಡಿ, ಪದಾಧಿಕಾರಿಗಳಾದ ಪ್ರವೀಣ್, ಅಜರುದ್ದೀನ್, ಕುಮಾರ್, ಪ್ರಜ್ವಲ್, ಮುಬಾರಾಕ್ ಉಪಸ್ಥಿತರಿದ್ದರು.