ಗ್ರಾಮೀಣ ಜನರ ಕೊಡುಗೆ ಅಪಾರ

MDG kannada
ಮೂಡಿಗೆರೆ ತಾಲೂಕಿನ ಕಿತ್ತಲೆಗಂಡಿ ಶಾಲೆಯಲ್ಲಿ ತಾಲೂಕು ಕಸಾಪದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಹಳೆಕೋಟೆ ವಿಶ್ವಮಿತ್ರ, ಬಿ.ಪಿ.ಪ್ರಸಾದ್ ಬಕ್ಕಿ, ಡಿ.ಕೆ.ಲಕ್ಷ್ಮಣಗೌಡ, ಅನಿತಾ ಜಗದೀಪ್, ಎಚ್.ಎಂ.ಶಾಂತ ಕುಮಾರ್, ಶಬಾನ, ಪದ್ಮಲತಾ ಇತರರಿದ್ದರು.
Published on

ಮೂಡಿಗೆರೆ: ಕನ್ನಡ ಭಾಷೆ, ಕಲೆ, ಸಂಸ್ಕೃತಿ ಬೆಳೆಸುವಲ್ಲಿ ಗ್ರಾಮೀಣ ಜನರ ಕೊಡುಗೆ ಅಪಾರ ಎಂದು ಅಮೆರಿಕದ ಅಕ್ಕ ಕನ್ನಡ ಸಂಘಟನೆ ಅಧ್ಯಕ್ಷ ಡಾ. ಹಳೇಕೋಟೆ ವಿಶ್ವಾಮಿತ್ರ ಹೇಳಿದರು.

ಕಿತ್ತಲೆಗಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಕನ್ನಡ ಭಾಷೆ ವಿಶ್ವದ ಅತ್ಯಂತ ಸರಳ ಮತ್ತು ಸುಂದರ ಭಾಷೆಗಳ ಪೈಕಿ ಒಂದಾಗಿದೆ. ಕನ್ನಡದ ಜನ ಯಾವ ದೇಶಕ್ಕೆ ಹೋದರೂ ಸಂಘಟಿತರಾಗಿ ಕನ್ನಡಪರ ಸಂಘಗಳನ್ನು ರಚಿಸಿಕೊಂಡು ಭಾಷಾಭಿಮಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹೃದಯ ಶ್ರೀಮಂತಿಕೆ ಹೊಂದಿದ್ದಾರೆ. ಅಮೆರಿಕದಲ್ಲಿರುವ ಎಲ್ಲ ಕನ್ನಡ ಕೂಟಗಳನ್ನು ಒಟ್ಟುಗೂಡಿಸಿ ಅಕ್ಕ ಸಂಘಟನೆ ರಚಿಸಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡದ ಕುಟುಂಬಗಳ ಮಕ್ಕಳಿಗೆ ಕನ್ನಡ ಕಲಿಸುವ ತರಗತಿಗಳನ್ನು ಆಯೋಜಿಸುತ್ತಿರುವುದಾಗಿ ತಿಳಿಸಿದರು.

ಕನ್ನಡ ಶಾಲೆಗಳನ್ನು ಅಭಿವೃದ್ಧಿ ಮಾಡಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮುಂದಾಗಬೇಕು. ಆಗ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದರು.

ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪ್ರಸಾದ್ ಬಕ್ಕಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಜನರು ಕನ್ನಡದಲ್ಲಿ ಮಾತನಾಡಿದರೆ ಕನ್ನಡ ತಾನಾಗಿಯೇ ಬೆಳೆಯುತ್ತದೆ ಎಂದು ತಿಳಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ, ಕನ್ನಡ ಭಾಷೆಗೆ ಗಂಡಾಂತರ ಬರದಂತೆ ತಡೆಯಬೇಕಾದರೆ ಮೊದಲು ಸರ್ಕಾರಿ ಶಾಲೆಗಳು ಉಳಿಯಬೇಕು. ಇದಕ್ಕೆ ಕನ್ನಡಿಗರೆಲ್ಲರೂ ಕೈಜೋಡಿಸಬೇಕು ಎಂದರು.

ಹಳೇಕೋಟೆ ವಿಶ್ವಾಮಿತ್ರ ಮತ್ತು ಬಿ.ಪಿ.ಪ್ರಸಾದ್ ಬಕ್ಕಿ ಅವರನ್ನು ಸನ್ಮಾನಿಸಲಾಯಿತು. ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಅನಿತಾ ಜಗದೀಪ್, ಜಿಲ್ಲಾ ಸಂಚಾಲಕ ಎಚ್.ಎಂ.ಶಾಂತಕುಮಾರ್, ಮುಖ್ಯಶಿಕ್ಷಕಿ ಶಬಾನಾ, ಶಿಕ್ಷಕಿ ಪದ್ಮಲತಾ, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ಅಧ್ಯಕ್ಷ ಎಂ.ಎಸ್.ನಾಗರಾಜ್, ಪ್ರದೀನ್, ರವೀಂದ್ರ ಬಕ್ಕಿ, ಮಂಜುನಾಥ್ ಬೆಟ್ಟಗೆರೆ, ಸುಚಿತ್ರಾ ಪ್ರಸನ್ನ, ಪ್ರಕಾಶ್, ಇಂಪಾ ಸವೀನ್, ಪವನಾ ವಿಜಯ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net