ಗ್ರಾಮೀಣ ಜನರ ಅಭಿವೃದ್ಧಿಗೆ ಹಲವು ಯೋಜನೆ ಜಾರಿ

20-kkr1(6-23
Published on

ಕಿಕ್ಕೇರಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಎಲ್ಲವನ್ನೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮಹಾಪ್ರಬಂಧಕಿ ಭಾಗ್ಯರೇಖಾ ತಿಳಿಸಿದರು.


ಸಮೀಪದ ಹಿರಿಕಳಲೆ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ ಮಂಗಳವಾರ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆಯ ಜನ್ ಸುರಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನ ಜ್ಯೋತಿ, ಜನ್ ಸುರಕ್ಷಾ ಅಭಿಯಾನ ಯೋಜನೆಯಡಿ ವಾರ್ಷಿಕವಾಗಿ 436 ರೂ., 20ರೂ. ಪಾವತಿಸಿದರೆ ಆಕಸ್ಮಿಕ ಸಾವಿಗೆ 2ಲಕ್ಷ ರೂ.ಪರಿಹಾರ ಹಣ ಸಿಗಲಿದೆ. ಗ್ರಾಹಕರು ಬ್ಯಾಂಕ್ ಪ್ರಗತಿಗೆ ಸಹಕರಿಸಬೇಕು ಎಂದು ಹೇಳಿದರು.


ಜಿಲ್ಲಾ ಪ್ರಾದೇಶಿಕ ಪ್ರಬಂಧಕ ಆನಂದ ಸಿ.ಹೆಗಡೆ ಮಾತನಾಡಿ, ತಾಲೂಕಿನಲ್ಲಿ 12 ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಆರ್ಥಿಕ ಸಾಕ್ಷರತೆ ಹೊಂದಲು ಮನೆ ಮನೆಗೆ ಅರಿವು ಮೂಡಿಸುವ ಕೆಲಸವನ್ನು ಬ್ಯಾಂಕ್ ಮಾಡಲಾಗುತ್ತಿದೆ. ಬ್ಯಾಂಕ್‌ನಿಂದ ಸಾಲ ಪಡೆದು, ಸಕಾಲದಲ್ಲಿ ಮರುಪಾವತಿ ಮಾಡಿ ಎಂದು ಹೇಳಿದರು.


ವಿವಿಧ ಸ್ತ್ರೀ ಶಕ್ತಿ ಸಂಘದವರು ತಯಾರಿಸಿದ್ದ ಹಪ್ಪಳ, ಸಂಡಿಗೆ, ಊಟದ ಎಲೆ, ಬ್ಯಾಗ್, ಗಂಧದಕಡ್ಡಿ, ಅಡಕೆ ಹಾಳೆಯ ತಟ್ಟೆಗಳು, ಪ್ಲೇಟ್‌ಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಎಚ್.ಸಿ.ನಾಗರಾಜು, ಹಿರಿಕಳಲೆ ಗ್ರಾಪಂ ಪಿಡಿಒ ನವೀನ್, ಅಧ್ಯಕ್ಷೆ ಕಾಳಮ್ಮ ನಿಂಗೇಗೌಡ, ಉಪಾಧ್ಯಕ್ಷ ಮಂಜೇಗೌಡ, ಸದಸ್ಯ ಕಾಂತರಾಜು, ಸ್ವಸಹಾಯ ಸಂಘದ ಸದಸ್ಯರು, ಬ್ಯಾಂಕ್ ವ್ಯವಸ್ಥಾಪಕ ಅಮಿತ್, ಗಂಗಾಧರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net