

ಕಲಬುರಗಿ: ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಶಾಸಕನಾಗಿರುವ ನನ್ನ ಮಾತನ್ನೇ ಕೇಳುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಶಾಸಕ ಬಸವರಾಜ ಮತ್ತಿಮಡು ಅಸಹಾಯಕತೆ ಪ್ರದರ್ಶಿಸಿದರು. ಕಮಲಾಪುರ ತಾಲೂಕಿನ ಚವ್ಹಾಣ್ ತಾಂಡಾದಲ್ಲಿ ಮಹಿಳೆಯೊಬ್ಬರಿಗೆ ರೌಡಿಶೀಟರ್ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡಿದ್ದು ಪೊಲೀಸ್ ಠಾಣೆಗೆ ದೂರು ನೀಡಲು ಬಂದರೆ ಮೂರು ದಿನದಿಂದ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪಿಎಸ್‌ಐ, ಎಸ್‌ಪಿ ಅವರಿಗೆ ಮಾತನಾಡಿ, ಎಫ್‌ಐಆರ್ ದಾಖಲಿಸಿ ಎಂದರೂ ಕುಂಟು ನೆಪ ಹೇಳುತ್ತಿದ್ದಾರೆ. ರೌಡಿಶೀಟರ್, ಗಡಿಪಾರು ಆದವನಿಗೆ ರಕ್ಷಣೆ ಮಾಡುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ಸಹೋದರರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕೂಡಲೇ ಎಫ್‌ಐಆರ್ ದಾಖಲಿಸಿ, ಕ್ರಮ ಕೈಗೊಳ್ಳದಿದ್ದರೆ ಸಾವಿರಾರು ಜನರೊಂದಿಗೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮತ್ತಿಮಡು ಎಚ್ಚರಿಕೆ ನೀಡಿದರು.