ಗ್ರಾಮೀಣ ಕ್ರೀಡೆ ಉಳಿಸುವುದು ಅನಿವಾರ್ಯ

TKE 1(1) GADI SPARDE
ಅಜ್ಜಂಪುರ ತಾಲೂಕು ಕೆ.ಗೊಲ್ಲರಹಳ್ಳಿಯಲ್ಲಿ ಆಯೋಜಿಸಿದ್ದ ಅಂತಾರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಹೋರಿಗಳ ಓಟ.
Published on

ತರೀಕೆರೆ: ಗ್ರಾಮೀಣ ಕ್ರೀಡೆಗಳ ಉಳಿಸುವ ಅತ್ಯವಶ್ಯಕವಾಗಿದೆ ಎಂದು ಕೆಡಿಪಿ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯೆ ಜಿ.ಎಸ್.ರಚನಾ ಹೇಳಿದರು.

ಅಜ್ಜಂಪುರ ತಾಲೂಕಿನ ಕೆ.ಗೊಲ್ಲರಹಳ್ಳಿಯಲ್ಲಿ ಶ್ರೀ ಚೌಡೇಶ್ವರಿ ದೇವಿ ಗೆಳೆಯರ ಬಳಗದಿಂದ ಗುರುವಾರ ಏರ್ಪಡಿಸಿದ್ದ ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಬಯಲು ಜಂಗೀ ಕುಸ್ತಿ, ಟಗರು ಕಾಳಗ, ಜೋಡೆತ್ತಿನ ಗಾಡಿ ಇತರ ಸ್ಪರ್ಧೆಗಳು ಗ್ರಾಮೀಣ ಸೊಗಡಿನ ಧ್ಯೋತಕವಾಗಿದೆ. ಇವುಗಳ ಉಳಿವಿಗೆ ಸರ್ಕಾರಗಳ ಜತೆಗೆ ಜನರೂ ಪ್ರಯತ್ನಿಸಬೇಕಿದೆ. ಇಂಥ ಕ್ರೀಡೆಗಳು ಗ್ರಾಮೀಣ ಜನರಲ್ಲಿ ಸಾಮರಸ್ಯ ಮೂಡಿಸುವುದಲ್ಲದೇ, ಮನೋಲ್ಲಾಸಗೊಳಿಸಲು ಪೂರಕ ಎಂದರು.

ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು, ಹಾವೇರಿ, ಹಾಸನ, ತುಮಕೂರು, ಶಿವಮೊಗ್ಗ, ಹೊನ್ನಾಳಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತಮಿಳುನಾಡು, ಮಹಾರಾಷ್ಟ್ರ ಇತರ ಕಡೆಗಳಿಂದ ಆಗಮಿಸಿದ್ದ ಕಟ್ಟುಮಸ್ತಾದ 50 ಜೋಡಿ ಎತ್ತುಗಳು ಸ್ಪರ್ಧೆಗೆ ಮೆರುಗು ನೀಡಿದವು.

ಮಳೆ ನಡುವೆಯೇ ಆರಂಭವಾದ ಅಂತಾರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ಆಕರ್ಷಕ ಬಹುಮಾನ ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಮಾಲೀಕರ ಚಾಟಿ ಏಟು ತಿಂದು ಟ್ರ್ಯಾಕ್‌ನಲ್ಲಿ ಹೋರಿಗಳ ಮೈನವಿರೇಳಿಸುವ ಓಟ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಗ್ರಾಪಂ ಅಧ್ಯಕ್ಷೆ ರಾಧಮ್ಮ, ಶ್ರೀ ಚೌಡೇಶ್ವರಿ ದೇವಿ ಗೆಳೆಯರ ಬಳಗದ ಪದಾಧಿಕಾರಿಗಳಾದ ಸಚಿನ್, ಮನೋಜ್, ವಿನಯ್, ರಾಜೇಶ, ರಂಗನಾಥ, ಅಜೇಯ್, ದಯಾನಂದ, ನವೀನ್, ಚೇತನ್, ರಾಹುಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net