

ಕೆ.ಆರ್.ಪೇಟೆ: ಗ್ರಾಮೀಣ ಭಾಗದ ವಿದ್ಯಾವಂತರು ತಾವು ಗಳಿಸಿದ ಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ವಿಜಯ ರಾಮೇಗೌಡ ಹೇಳಿದರು.
ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಗ್ರಾಮದ ಪುನೀತ್ ರಾಜ್‌ಕುಮಾರ್ ಮತ್ತು ದರ್ಶನ್ ಅಭಿಮಾನಿಗಳು ಕ್ರೇಜಿ ಕ್ರಿಕೆಟರ್ಸ್ ಹೆಸರಿನಲ್ಲಿ ಆಯೋಜಿಸಿದ್ದ ರಾಜ-ದೀಪ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕ್ರೀಡಾಚಟುವಟಿಕೆಗಳನ್ನು ಹೆಚ್ಚು ಉತ್ತೇಜಿಸಬೇಕು. ಯುವಕರು ಕ್ರೀಡಾ ಚಟುವಟಿಕೆಗಳ ಜತೆಗೆ ಸಾಂಸ್ಕೃತಿಕ ಸಿರಿವಂತರಾಗಬೇಕು. ಯುವಕರು ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.
ಗ್ರಾಮೀಣ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಗುರುತಿಸಲು, ಉತ್ತೇಜಿಸಲು ಮಿತ್ರ ಫೌಂಡೇಷನ್ ಸ್ಥಾಪಿಸಿದ್ದೇನೆ. ಮಕ್ಕಳ ದೈಹಿಕ ಸಾಮರ್ಥ್ಯ ಬೆಳವಣಿಗೆಗೆ ನೆರವಾಗಲು ಉಚಿತ ಜಿಮ್ ತೆರೆಯಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.
ತಾಲೂಕು ಪಂಚಾಯತಿ ಮಾಜಿ ಸದಸ್ಯ ಮಾಧವ ಪ್ರಸಾದ್ ಮಾತನಾಡಿ, ವಿಜಯ ರಾಮೇಗೌಡ ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಅಪಾರ ಕನಸುಗಳನ್ನು ಹೊಂದಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷಿಯಿಲ್ಲದೆ ಸಮಾಜ ಸೇವೆ ಮಾಡುತ್ತಾ ಜನರೊಂದಿಗಿದ್ದಾರೆ. ಇವರ ಸೇವೆಗೆ ಜನರ ಪ್ರೀತಿಯೂ ಸೇರಬೇಕು ಎಂದರು. ವೆಂಕಟೇಗೌಡ, ಶ್ರೀನಿವಾಸ್, ಮಾಲಿಂಗೇಗೌಡ, ಕ್ರೇಜಿ ಕ್ರಿಕೆಟರ್ಸ್‌ನ ರತನ್, ಸಂತು, ಗಗನ್, ಭರತ್, ಪ್ರಶಾಂತ್, ಕಿರಣ್ ಇತರರಿದ್ದರು.