ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಗತ್ಯ: ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ.ಪಿ.ಎನ್. ಗಣೇಶ್‌ಕುಮಾರ್ ಅಭಿಮತ

19
Published on

ಮೈಸೂರು: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಧನೆ ಮಾಡಬಲ್ಲ ಬಾಲ ಕ್ರೀಡಾ ಪ್ರತಿಭೆಗಳು ನಮ್ಮ ಗ್ರಾಮೀಣ ಪ್ರದೇಶದಲ್ಲಿಯೂ ಇದ್ದಾರೆ. ಅಂತಹ ಪ್ರತಿಭೆಯನ್ನು ಗುರುತಿಸಿ ಅಗತ್ಯವಿರುವ ಸೂಕ್ತ ವಾತಾವರಣ ಕಲ್ಪಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ.ಪಿ.ಎನ್. ಗಣೇಶ್‌ಕುಮಾರ್ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮೈಸೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ವರುಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗಳ ಹೋಬಳಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಗರ ವ್ಯಾಪ್ತಿಯ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗಿಂತ, ಗ್ರಾಮೀಣ ಪ್ರದೇಶಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯ ಅಧಿಕವಿರುತ್ತದೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ಕ್ರೀಡಾಂಗಣ ಮತ್ತು ಕ್ರೀಡಾ ಸಾಮಗ್ರಿಗಳ ಕೊರತೆಯಿದೆ. ಈ ಅಗತ್ಯ ಸೌಲಭ್ಯಗಳ ಜೊತೆಗೆ ಸೂಕ್ತ ಮಾರ್ಗದರ್ಶನ ದೊರೆತರೆ ಅವರು ಉತ್ತಮ ಸಾಧನೆ ಮಾಡಬಲ್ಲರು ಎಂದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ. ಸತೀಶ್ ಜವರೇಗೌಡ ಮಾತನಾಡಿ, ಪಠ್ಯದ ಕಲಿಕೆ ಮನೋವಿಕಾಸಕ್ಕೆ ತಳಹದಿ ಹಾಕಿದರೆ, ಕ್ರೀಡಾ ಚಟುವಟಿಕೆಗಳು ದೈಹಿಕ ವಿಕಾಸಕ್ಕೆ ನೆರವಾಗುತ್ತವೆ. ಶಾಲಾ ಕಲಿಕೆಯನ್ನು ಉಲ್ಲಾಸದಾಯಕಗೊಳಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಕ್ರೀಡಾಸಕ್ತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಶಿವಕುಮಾರ್ ಆರಾಧ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿ ಮಹದೇವ್, ತಾಲೂಕು ಸಂಘದ ಅಧ್ಯಕ್ಷ ರಘು, ಬನಶಂಕರಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸೋಮಣ್ಣ, ಅಹಿಂದ ಮುಖಂಡ ಜವರಪ್ಪ ಮಾತನಾಡಿದರು.
ವಲಯದ ಸಂಪನ್ಮೂಲ ವ್ಯಕ್ತಿಗಳಾದ ಎಸ್. ದೀಪು, ಮಹದೇವಸ್ವಾಮಿ, ಎಚ್.ಎಸ್. ಶಿಲ್ಪಾ, ಶಿಕ್ಷಕರ ಸಂಘದ ನಿರ್ದೇಶಕರಾದ ಅನಿಲ್ ಕುಮಾರ್, ಶಿವಪ್ಪ, ವಿಶೇಷಚೇತ ಸಿದ್ದಲಿಂಗಮೂರ್ತಿ ಇತರರು ಇದ್ದರು.
ವರುಣ ಹೋಬಳಿ ಮಟ್ಟದ ಕ್ರೀಡಾಕೂಟದ ಸಂಘಟನೆಯ ಜವಾಬ್ದಾರಿಯನ್ನು ಬನಶಂಕರಿ ವಿದ್ಯಾಸಂಸ್ಥೆ ವಹಿಸಿಕೊಂಡಿತ್ತು. ಪ್ರಾಥಮಿಕ ಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರಿಗೆ ಪತ್ಯೇಕವಾಗಿ ವೈಯಕ್ತಿಕ ಮತ್ತು ಗುಂಪು ಆಟೋಟ ಸ್ಪರ್ಧೆ ವಿಜೇತರಿಗೆ ಪ್ರಮಾಣ ಪತ್ರ, ಪದಕಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net