ಗ್ರಾಮೀಣ ಕಲೆಗಳತ್ತ ಆಸಕ್ತಿ ಮೂಡಿಸಿ

Bayalata
Published on

ಚಿತ್ರದುರ್ಗ: ಗ್ರಾಮೀಣ ಭಾಗದ ಅವಿಭಾಜ್ಯ ಅಂಗವಾಗಿದ್ದ ಬಯಲಾಟ ಕಲೆಯು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿದ್ದು, ಯುವಸಮೂಹದವರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಮಾಜಿ ಸಂಸದ ಜನಾರ್ದನ ಸ್ವಾಮಿ ಸಲಹೆ ನೀಡಿದರು.

ತರಾಸು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಮೂಲ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ. ನಾಡಿನ ಶಿಲ್ಪಕಲೆ, ಚಿತ್ರಕಲೆ, ಜನಪದ ಸಾಹಿತ್ಯ, ಸಂಗೀತ ಸೇರಿ ಇತರೆ ಕಲೆಗಳು ಸಂಸ್ಕೃತಿಯನ್ನು ಉತ್ತುಂಗದಲ್ಲಿ ರಾರಾಜಿಸಲು ಸಹಕಾರಿಯಾಗಿವೆ. ಇವುಗಳ ಬೆಳವಣಿಗೆಗೆ ಪ್ರತಿಯೊಬ್ಬರು ಕೈಜೋಡಿಸುವ ಅಗತ್ಯವಿದೆ ಎಂದರು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಕೋಟೆನಾಡು ಜನಪದ ಕಲೆಗಳ ಕಣಜವಾಗಿದೆ. ಕೋಲಾಟ, ಬಯಲಾಟ, ಸೋಬಾನೆ ಪದಗಳು ಈ ಜಿಲ್ಲೆಯ ಹಿರಿಮೆ ಹೆಚ್ಚಿಸಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಧಾರಾವಾಹಿಗಳ ವ್ಯಾಮೋಹಕ್ಕೆ ಸಿಲುಕಿ ಅವನತಿಯತ್ತ ಸಾಗುತ್ತಿದ್ದು, ಉಳಿಸಿ-ಬೆಳೆಸುವ ಕೆಲಸವಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಹಿರಿಯ ಕಲಾವಿದ ಕೆ.ಪಿ.ಭೂತಯ್ಯ ಅವರ ನೇತೃತ್ವದಲ್ಲಿ ನಗರ ಪ್ರದೇಶದಲ್ಲಿ ಬಯಲಾಟ ಪ್ರದರ್ಶನ ಆಯೋಜಿಸಿ, ಜನರಲ್ಲಿ ಆಸಕ್ತಿ ಬೆಳೆಸಲು ಮುಂದಾಗಿರುವುದು ಸ್ವಾಗತಾರ್ಹ ಸಂಗತಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್‌ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ರಂಗನಿರ್ದೇಶಕ ಪಿ.ತಿಪ್ಪೇಸ್ವಾಮಿ, ರೈತ ಮುಖಂಡರಾದ ಕೆ.ಸಿ. ಹೊರಕೇರಪ್ಪ, ಕಸವನಹಳ್ಳಿ ರಮೇಶ್, ಶಿವಕುಮಾರ್, ಪಪೂ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಚೌಡಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಒ.ಮುರಾರ್ಜಿ, ಕಲಾವಿದ ಕೆ.ಪಿ.ಭೂತಯ್ಯ ಇತರರಿದ್ದರು.

ಚಳ್ಳಕೆರೆ ತಾಲೂಕು ವರವು ಗ್ರಾಮದ ಬೊಮ್ಮಲಿಂಗೇಶ್ವರ ವಾಲ್ಮೀಕಿ ಕಲಾ ಸಂಘದ ಕಲಾವಿದರು ಕರಿಭಂಟನ ವಧೆ ಬಯಲಾಟ ಪ್ರದರ್ಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net