

ಅರಕಲಗೂಡು: ಪಟ್ಟಣದ ಕೋಟೆ ಗಣಪತಿ ಕೊತ್ತಲು ಆವರಣದಲ್ಲಿ ಪ್ರತಿಷ್ಠಾಪಿಸಿರುವ ವಿನಾಯಕಮೂರ್ತಿ ಸನ್ನಿಧಿಯಲ್ಲಿ 51ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ ವತಿಯಿಂದ ಶನಿವಾರ ಸಾರ್ವಜನಿಕರಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳು ಜನರ ಮನಸ್ಸಿಗೆ ಮುದ ನೀಡಿದವು.
ಗ್ರಾಮೀಣ ವಸ್ತುಗಳು ಮತ್ತು ಗ್ರಾಮೀಣ ಕಲೆಯನ್ನು ಉತ್ತೇಜಿಸಲು ಕರಕುಶಲ ಕಲೆಗಳಾದ ಊಟದ ಎಲೆಗಳನ್ನು ಸಿದ್ಧ ಪಡಿಸುವುದು, ಮಣ್ಣಿನಿಂದ ಮಡಕೆ ಮಾಡುವುದು, ಪೇಪರ್‌ನಿಂದ ಕವರ್ ಪೊಟ್ಟಣಗಳ ತಯಾರಿಕೆ, ಬಿಡಿ ಹೂಗಳಿಂದ ನೂಲಿನ ದಾರದ ಮೂಲಕ ಹೂಮಾಲೆ ಕಟ್ಟುವುದು, ಬಿದಿರಿನಿಂದ ಮರದ ಕುಕ್ಕೆಗಳನ್ನು ಹೆಣೆಯುವುದು, ಚಿತ್ರ ಬಿಡಿಸುವ ಕಾರ್ಯಾಗಾರದಲ್ಲಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಪ್ರೇಮಾ ಮತ್ತು ಶಿವಲಿಂಗಪ್ಪ ಅವರು ಬಿಡಿಸಿದ ಮುತ್ತುಗದ ಎಲೆಗಳಿಂದ ಊಟದ ಎಲೆಗಳನ್ನು ಸಿದ್ಧಪಡಿಸುವ ಬಗ್ಗೆ, ಪುಟ್ಟಸ್ವಾಮಿಶೆಟ್ಟರು ಮಣ್ಣಿನಿಂದ ಮಡಕೆಗಳನ್ನು ಸಿದ್ಧಮಾಡುವುದು, ಎನ್.ಡಿ. ಜಗಮೂರ್ತಿ ಅವರು ಪೇಪರ್‌ನಿಂದ ಕವರ್ ಪೊಟ್ಟಣ, ನಾಗಮ್ಮ ರಾಜಪ್ಪ, ವಸಂತ ಕೃಷ್ಣ ಅವರು ಬಿಡಿ ಹೂಗಳಿಂದ ನೂಲಿನ ದಾರದ ಮೂಲಕ ಹೂಮಾಲೆ ಕಟ್ಟುವ ಕುರಿತು ತರಬೇತಿ ನೀಡಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್‌ಗಳನ್ನು ವಿತರಿಸಲಾಯಿತು. ಮಧ್ಯಾಹ್ನ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.