ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿ

Tarabeti
Published on

ಬೀದರ್: ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾಮಗಳು ಅಭಿವೃದ್ಧಿಯಾಗಬೇಕೆಂಬ ಕನಸು ಅಬ್ದುಲ್ ನಜೀರ್ ಸಾಬ್ ಅವರದ್ದಾಗಿತ್ತು. ಅವರ ಕನಸಿನಂತೆ ನೂತನ ಗ್ರಾಪಂ ಸದಸ್ಯರು ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಬೇಕೆಂದು ಇಲ್ಲಿನ ಸಹಾರ್ದ ತರಬೇತಿ ಸಂಸ್ಥೆ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಹೇಳಿದರು.

ನಗರದ ಡಾ.ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ಗ್ರಾಮೀಣ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ರಿಲಾಯನ್ಸ್ ಫೌಂಡೇಷನ್ ವತಿಯಿಂದ ಔರಾದ್ ತಾಲೂಕಿನ ಲಾಧಾ, ಬೆಳಕುಣಿ(ಚೌ) ಗ್ರಾಪಂ ನೂತನ ಸದಸ್ಯರಿಗೆ ಸೋಮವಾರ ಹಮ್ಮಿಕೊಂಡಿದ ನಾಯಕತ್ವ ಮತ್ತು ಗ್ರಾಮಾಭಿವೃದ್ಧಿ ತರಬೇತಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ಅವರು ಗ್ರಾಪಂಗೆ ಹೊಸ ಆಯಾಮ ನೀಡಿದರು. ನೀರು ಸರಬರಾಜಿಗೆ ಕ್ರಾಂತಿಕಾರಿ ಹೆಜ್ಜೆಯಿಟ್ಟು ನೀರ್ ಸಾಬ್ ಎಂದು ಖ್ಯಾತಿ ಪಡೆದರು. ಎಲ್ಲರೂ ಗ್ರಾಮೀಣಕ್ಕೆ ಮೂಲಸೌಲಭ್ಯ ಕಲ್ಪಿಸಲು ದುಡಿದು ಜನಮನ ಗೆಲ್ಲಬೇಕು ಎಂದರು.

ರಿಲಾಯನ್ಸ್ ಫೌಂಡೇಷನ್ ಸಹಾಯಕ ಯೋಜನಾಧಿಕಾರಿ ರಾಮಚಂದ್ರ ಶೇರಿಕಾರ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರದ ನಾನಾ ಯೋಜನೆಗಳು ನೇರ ಗ್ರಾಪಂ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ನೂತನ ಸದಸ್ಯರು ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು ಎಂದರು.

ಪ್ರಮುಖರಾದ ದೇವಿದಾಸ, ಎಂ.ಡಿ. ನಜೀರ್, ಶಿವರಾಜ ಚಾಂಬೋಳೆ, ಶಿವಾನಂದ ಜಾಬಾ, ಭರತ ದದ್ದಾಪುರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net