

ಎನ್.ಆರ್.ಪುರ: ಗ್ರಾಮೀಣ ಅಂಚೆ ನೌಕರರು ಸಂಘಟಿತವಾಗಿ ಹೋರಾಟ ಮಾಡಿದ ಫಲವಾಗಿ ಹಲವು ಸವಲತ್ತುಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಪ್ರಕಾಶ್ ಹೇಳಿದರು.
ಹೊನ್ನೇಕೊಡಿಗೆ ಉಪ ಅಂಚೆ ಕಚೇರಿ ನಿವೃತ್ತ ಪೋಸ್ಟ್ ಮಾಸ್ಟರ್ ಕೆ.ಟಿ.ಶೇಷಣ್ಣ ಗೌಡ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, 41 ವಷರ್ ಕಾಲ ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರಿಗೆ ಆಯೋಜಿಸಿರುವ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮೇಲಧಿಕಾರಿಗಳು ಭಾಗವಹಿಸದಿರುವುದು ಬೇಸರದ ಸಂಗತಿ. ಗ್ರಾಮೀಣ ಅಂಚೆ ನೌಕರರು ದಿನಕ್ಕೆ 7ರಿಂದ 8 ಗಂಟೆವರೆಗೆ ಕೆಲಸ ಮಾಡಿದರೂ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇ 18ರಂದು ಚಿಕ್ಕಮಗಳೂರಿನಲ್ಲಿ ಆಯೋಜಿಸಿರುವ ಗ್ರಾಮೀಣ ಅಂಚೆ ನೌಕರರ ಸಮಾವೇಶದಲ್ಲಿ ಗ್ರಾಮೀಣ ಅಂಚೆ ನೌಕರರು ಭಾಗವಹಿಸಬೇಕು. ಸರ್ಕಾರಕ್ಕೆ ಸಂಘಟನೆ ಮೂಲಕ ಕೇಳಿ ಪಡೆಯುವ ವ್ಯವಸ್ಥೆಯಾಗಬೇಕು ಎಂದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ನಿವೃತ್ತಿಯಾದ ಕೆ.ಟಿ.ಶೇಷಣ್ಣ ಗೌಡ ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂಘವನ್ನು ಸದೃಢವಾಗಿ ಕಟ್ಟಡಲು ಪ್ರೇರೇಪಣೆ ನೀಡಿದ್ದರು. ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಹೋರಾಟ ಮಾಡಿದ್ದರು ಎಂದು ತಿಳಿಸಿದರು.
ಕೆ.ಟಿ.ಶೇಷಣ್ಣ ಗೌಡ ಮಾತನಾಡಿ, ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಅವರು ನನ್ನ ಮನವಿ ಮೇರೆಗೆ ಹೊನ್ನೆಕೊಡಿಗೆಗೆ ಉಪ ಅಂಚೆ ಕಚೇರಿಯನ್ನು ಮಂಜೂರು ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಅಂಚೆ ನೌಕರರು ಪಿಂಚಣಿ ಪಡೆಯುವ ನಿಟ್ಟಿನಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದರು.
ಅಂಚೆ ಇಲಾಖೆಯ ರವಿಶಂಕರ್, ತಿಪ್ಪೇಶ್, ರಫೀಕ್, ಕಡಹಿನಬೈಲು ಗ್ರಾಪಂ ಸದಸ್ಯ ಎ.ಬಿ.ಮಂಜುನಾಥ್, ಪಟ್ಟಣದ ಮುಖ್ಯ ಪೋಸ್ಟ್‌ಮಾಸ್ಟರ್ ಅರುಣ್‌ಕುಮಾರ್, ಅಂಚೆ ಇಲಾಖೆಯ ನಿಧಿಶ್ರೀ, ರಿತಿನ್. ಎಸ್.ನಾಗೇಶ್, ತಕ್ಷಕ್, ಮುರಾರ್ಜಿ ವಸತಿ ಶಾಲೆಯ ಮೋಹನ್ ಇದ್ದರು.