

ಹನೂರು: ಕಾಡಂಚಿನ ಗ್ರಾಮದ ಜನರು ಸಮಾಜದ ಮುಖ್ಯವಾಹಿನಿಗೆ ತರಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಳಜಿ ವಹಿಸಿದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಮಲೆಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಬುಡಿಕ್ಕಿ, ತೊಕೆರೆ ಹಾಗೂ ದೊಡ್ಡಾಣೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಸರ್ಕಾರಿ ಸೌಕರ್ಯ ವಂಚಿತ ಕುಟುಂಬಗಳ ಸಮೀಕ್ಷೆ ಸಂಬಂಧ ಶನಿವಾರ ಮಲೆಮಹದೇಶ್ವರ ಬೆಟ್ಟದಲ್ಲಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಾಡದೇ ಇರುವ ಕಾರ್ಯಗಳಿಲ್ಲ. ಉತ್ತಮ ಸಮಾಜ ನಿರ್ಮಿಸುವುದರ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಇವರ ಕಾಯಕ ನಿಷ್ಠೆ ಮೆಚ್ಚುವಂತದ್ದು. ಕಾಡಂಚಿನ ಗ್ರಾಮಗಳ ಸ್ಥಿತಿ-ಗತಿ ಅರಿಯುವ ಸಲುವಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ಸಂಬಂಧ ಸಮೀಕ್ಷೆ ನಡೆಸಿ ಜನರಿಗೆ ಅನುಕೂಲ ಕಲ್ಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಪ್ರತಿಯೊಬ್ಬರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಮಾನವ ಜನ್ಮ ಅಮೂಲ್ಯವಾದುದು. ಹುಟ್ಟು - ಸಾವಿನ ನಡುವಿನ ಬದುಕಿನಲ್ಲಿ ಮಾನವೀಯ ಮೌಲ್ಯ ಹಾಗೂ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಸಾರ್ಥಕತೆ ಮೆರೆಯಬೇಕು ಎಂದು ಸಲಹೆ ನೀಡಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲಿತಾಯಿ ಮಾತನಾಡಿ, ಯೋಜನೆಯು ಸ್ವ ಸಹಾಯ ಸಂಘಗಳನ್ನು ರಚಿಸುವುದರ ಮೂಲಕ ಮಹಿಳೆಯರು, ರೈತರಿಗೆ ಹಲವು ಸ್ವಾವಲಂಬನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು, ಸ್ವಚ್ಛತೆ, ದೇಗುಲಗಳ ಅಭಿವೃದ್ಧಿ, ಮಠ, ಮಂದಿರ, ಸಮುದಾಯ ಭವನ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಧನ ನೀಡುತ್ತಿದೆ. ಅಲ್ಲದೆ ನಿರ್ಗತಿಕರಿಗೆ ಮಾಸಾಶನ, ಅಂಗವಿಕಲರಿಗೆ ಅಗತ್ಯ ಸಲಕರಣೆಗಳು ಹಾಗೂ ವಾತ್ಸಲ್ಯ ಮನೆ, ಶಿಷ್ಯವೇತನ ಸೇರಿದಂತೆ ಇನ್ನು ಅನೇಕ ಸೌಕರ್ಯ ಒದಗಿಸುತ್ತಿದೆ. ಇದೀಗ ಮ.ಬೆಟ್ಟ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲ ಸೌಕರ್ಯ ಸಂಬಂಧ ಯೋಜನೆಯ 60 ಪ್ರತಿನಿಧಿಗಳು 6 ತಂಡಗಳಾಗಿ 225 ಮನೆಗಳ ಸಮೀಕ್ಷೆ ನಡೆಸಿದ್ದು, ಇದರ ವರದಿಯನ್ನು ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರಾ, ತಾಲೂಕು ಯೊಜನಾಧಿಕಾರಿ ಪ್ರವೀಣ್‌ಕುಮಾರ್, ಗ್ರಾಪಂ ಅಧ್ಯಕ್ಷ ಕುಮಾರ್, ಸದಸ್ಯರಾದ ಕೋಕಿಲ, ಲಕ್ಷ್ಮೀ ವೀರಣ್ಣ, ಪಿಡಿಒ ಕಿರಣ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ರಾಜಪ್ಪ, ಅರುಣ್‌ಕುಮಾರ್, ಮುಖಂಡರಾದ ಲಕ್ಷ್ಮಣ, ಮಹದೇವಸ್ವಾಮಿ, ಚಿಕ್ಕ ಮಹದೇವಗೌಡ, ಚಿನ್ನಪ್ಪ ಹಾಗೂ ಇತರರು ಇದ್ದರು.