ಗ್ರಾಮಸ್ಥರಿಗೆ ಉಚಿತ ಮಾಸ್ಕ್

15 NRD-1
Published on

ನರಗುಂದ: ಕರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಮಾಸ್ಕ್, ಸ್ಯಾನಿಟೈಸರ್ ಪ್ರಮುಖ ಪಾತ್ರ ವಹಿಸುತ್ತಿವೆ. ಆದರೆ, ಸ್ಥಳೀಯವಾಗಿ ಅವಶ್ಯವಿರುವಷ್ಟು ಮಾಸ್ಕ್​ಗಳು ಜನರಿಗೆ ದೊರೆಯುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕಾಗಿ ತಾಲೂಕಿನ ಬನಹಟ್ಟಿ ಗ್ರಾಪಂ ಗ್ರಾಮದಲ್ಲೇ ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಜನರಿಗೆ ವಿತರಿಸಲು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.

ದೇಶಾದ್ಯಂತ ಎರಡನೇ ಹಂತದ ಲಾಕ್ ಡೌನ್ ವಿಸ್ತರಣೆಯಾಗಿದೆ. ಸಾರ್ವಜನಿಕರು ಔಷಧ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತರೂ ಸರಿಯಾಗಿ ಮಾಸ್ಕ್​ಗಳು ಸಿಗುತ್ತಿಲ್ಲ. ಇದರಿಂದ ಕೆಲವರು ಮುಖಕ್ಕೆ ಮಾಸ್ಕ್ ಧರಿಸದೆಯೇ ಹೊರಗಡೆ ಹೋಗುವ ಪರಿಸ್ಥಿತಿ ನಿರ್ವಣವಾಗಿದೆ. ಕರೊನಾ ವೈರಸ್ ಮತ್ತಷ್ಟು ಹರಡುವ ಭೀತಿ ಇದೆ. ಇದನ್ನು ಗಂಭೀರ ವಿಷಯವಾಗಿ ತೆಗೆದುಕೊಂಡಿರುವ ಬನಹಟ್ಟಿ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸಿ ಮನೆ-ಮನೆಗೆ ವಿತರಿಸುವ ವಿನೂತನ ಕಾರ್ಯಕ್ಕೆ ಮುಂದಾಗಿದೆ.

ಗ್ರಾಪಂ 14ನೇ ಹಣಕಾಸು ಯೋಜನೆಯಡಿ 35,000 ರೂ. ವೆಚ್ಚದಲ್ಲಿ ಗ್ರಾಪಂ ವ್ಯಾಪ್ತಿಯ ಬನಹಟ್ಟಿ, ಮೂಗನೂರ, ಕುರ್ಲಗೇರಿ ಗ್ರಾಮ ಸೇರಿ 1400ಕ್ಕೂ ಅಧಿಕ ಕುಟುಂಬಗಳ ಎಲ್ಲ ಜನರಿಗೂ ಉಚಿತವಾಗಿ ಮಾಸ್ಕ್ ವಿತರಿಸಲು ಸಜ್ಜಾಗಿದೆ. ಇದಕ್ಕಾಗಿ ನಾಲ್ಕೈದು ದಿನಗಳ ಹಿಂದೆ ಅಂಗಡಿಯಿಂದ ಗುಣಮಟ್ಟದ ಕಾಟನ್ ಬಟ್ಟೆ ತಂದಿದ್ದು, ಗ್ರಾಮದ ಅನುಭವಿ ರ್ದಜಿ (ಟೇಲರ್)ಗಳಾದ ಮಲ್ಲಿಕಾರ್ಜುನ ಹತ್ತಿಕಾಳ, ಫಕೀರಪ್ಪ ಉಳ್ಳಾಗಡ್ಡಿ, ಶೇಖರಯ್ಯ ಕುವತ್ತಿಮಠ, ಚಂದ್ರು ಅವರಿಂದ ಮಾಸ್ಕ್​ಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 5000 ಮಾಸ್ಕ್​ಗಳನ್ನು ತಯಾರಿಸಿ ಏ. 16ರಿಂದ ಪ್ರತಿ ಮನೆ-ಮನೆಗೆ ವಿತರಿಸುವ ಗುರಿ ಹೊಂದಿದ್ದೇವೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಹಾದಿಮನಿ ತಿಳಿಸಿದರು.

ಕರೊನಾ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ, ಹಳ್ಳಿ ಜನರಿಗೆ ಸರಿಯಾಗಿ ಮಾಸ್ಕ್​ಗಳು ದೊರೆಯುತ್ತಿರಲಿಲ್ಲ. ಈಗ ಬನಹಟ್ಟಿ ಗ್ರಾಪಂದಿಂದ ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸುವುದು ಒಳ್ಳೆಯ ಕಾರ್ಯವಾಗಿದೆ. ಕರೊನಾ ಜಾಗೃತಿ ಜತೆಜತೆಗೆ ಎಲ್ಲರಿಗೂ ಅನುಕೂಲ ಕಲ್ಪಿಸಿದಂತಾಗುತ್ತದೆ.| ಶಿವರಾಜ ಕಲ್ಲಾಪೂರ, ಬನಹಟ್ಟಿ ಗ್ರಾಮದ ನಿವಾಸಿ

ಕರೊನಾ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಆದರೆ, ಕೆಲವರಿಗೆ ಮಾಸ್ಕ್​ಗಳಿಲ್ಲದ ಕಾರಣ ಗ್ರಾಮದ ಎಲ್ಲೆಂದರಲ್ಲಿ ನಿಲ್ಲುವುದು, ತಿರುಗಾಡುವುದು ಕಂಡುಬರುತ್ತಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ 14ನೇ ಹಣಕಾಸು ಯೋಜನೆಯಡಿ ಗ್ರಾಮದ ಪ್ರತಿಯೊಬ್ಬರಿಗೂ ಬಟ್ಟೆಯಿಂದ ತಯಾರಿಸಿ ಮಾಸ್ಕ್​ಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ.| ಕೆ.ಎಸ್. ಹಾದಿಮನಿ, ಬನಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net