ಗ್ರಾಮಸ್ಥರಿಂದ ಅಧಿಕಾರಿಗಳಿಗೆ ಅರ್ಜಿಗಳ ಸಲ್ಲಿಕೆ

21M.D.R.2
Published on

ಮದ್ದೂರು: ತಾಲೂಕಿನ ನಂಬಿನಾಯಕನಹಳ್ಳಿಯಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ವಿವಿಧ ಸಮಸ್ಯೆಗಳ ಕುರಿತಾದ 165ಕ್ಕೂ ಹೆಚ್ಚು ಅರ್ಜಿಗಳನ್ನು ಗ್ರಾಮಸ್ಥರು ಅಧಿಕಾರಿಗಳಿಗೆ ಸಲ್ಲಿಸಿದರು.

ಪಿಂಚಣಿ, ಆರ್‌ಟಿಸಿ ತಿದ್ದುಪಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ, ಒತ್ತುವರಿ ತೆರವು, ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ನಿರ್ಮಾಣ, ವೃದ್ಧಾಪ್ಯ, ವಿಧವಾ ವೇತನ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪಿಂಚಣಿ, ವೃದ್ಧಾಪ್ಯ ಹಾಗೂ ವಿಧವಾ ವೇತನ ಸೇರಿದಂತೆ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ನೇತೃತ್ವದಲ್ಲಿ ಬಗೆಹರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ವತಿಯಿಂದ ಇತ್ತೀಚೆಗೆ ಮಳೆಯಿಂದ ಹಾನಿಯಾದ 5 ಮನೆಗಳ ಮಾಲೀಕರಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಐವರು ಗರ್ಭಿಣಿಯರಿಗೆ ಸೀಮಂತ ಮಾಡಿ ಗೌರವಿಸಲಾಯಿತು. ಅಲ್ಲದೆ ವೃದ್ಧಾಪ್ಯ ಹಾಗೂ ವಿಧವಾ ವೇತನ ವಿತರಿಸಲಾಯಿತು.

ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸರ್ಕಾರದ ಯೋಜನೆಗಳನ್ನು ತಲುಪಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರೂಪಿಸಿದ್ದು, ಗ್ರಾಮಸ್ಥರು ಭಾಗವಹಿಸುವ ಮೂಲಕ ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ತಮ್ಮ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿಕೊಟ್ಟರು. ಗ್ರಾಪಂ ಅಧ್ಯಕ್ಷೆ ರಂಜಿತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ತಿಮ್ಮೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಗಲಕ್ಷ್ಮೀ, ತಾಪಂ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net