

ಹಗರಿಬೊಮ್ಮನಹಳ್ಳಿ: ಸಕ್ರಿಹಳ್ಳಿ ಗ್ರಾಮಸ್ಥರನ್ನು ಅಡವಿಕ್ಯಾದಿಹಳ್ಳಿ ಕಂದಾಯ ಗ್ರಾಮದಿಂದ ಸೊನ್ನ ಗ್ರಾಪಂಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಗ್ರಾಮದ ಪ್ರಮುಖರು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಸೊನ್ನ ಗ್ರಾಪಂ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನಗೌಡ ಮಾತನಾಡಿ, ಸೊನ್ನ ಗ್ರಾಪಂ ವ್ಯಾಪ್ತಿಗೆ ಸಕ್ರಿಹಳ್ಳಿ ಮತದಾರರನ್ನು ಸೇರಿಸಿದ್ದರೂ, ಗ್ರಾಮಸ್ಥರನ್ನು ಸೇರಿಸಿಲ್ಲ. ಪ್ರಸ್ತುತ ಅಡವಿಕ್ಯಾದಗಿಹಳ್ಳಿ ಮೋರಗೆರೆ ಗ್ರಾಪಂ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಇದರಿಂದಾಗಿ ಸಕ್ರಹಳ್ಳಿ ಗ್ರಾಮದ ಮತದಾರರನ್ನು ಕೂಡ ಸೊನ್ನ ಗ್ರಾಪಂಗೆ ಸೇರಿಸುವಂತೆ ಒತ್ತಾಯಿಸಿದರು.
ಸಕ್ರಿಹಳ್ಳಿ ಗ್ರಾಮದಲ್ಲಿ 145 ಮನೆಗಳಿದ್ದು, 1023 ಜನಸಂಖ್ಯೆ ಇದೆ. ಗ್ರಾಮದ ಜನಸಂಖ್ಯೆಗೆ ಅನುಗುಣವಾಗಿ ನಿಗದಿ ಪಡಿಸಿರುವ ಸದಸ್ಯ ಸ್ಥಾನಗಳು ಮೋರಗೇರಿ ಗ್ರಾಪಂನಲ್ಲಿವೆ. ಇದರಿಂದಾಗಿ ಸಕ್ರಿಹಳ್ಳಿ ಗ್ರಾಮಸ್ಥರು ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹಾಗೂ ಸೌಲಭ್ಯ ಪಡೆಯಲು ಅವಕಾಶ ಇಲ್ಲದಂತಾಗಿದೆ ಎಂದು ದೂರಿದರು.
ಸಕ್ರಿಹಳ್ಳಿ ಗ್ರಾಮಕ್ಕೆ ಅನ್ಯಾಯವಾಗುತ್ತಿರುವುದರಿಂದ 2020ರ ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡಿದ್ದೆವು. ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಗಿತ್ತು.
ಬಳಿಕ ಅಡವಿಕ್ಯಾದಿಗಿಹಳ್ಳಿ ಕಂದಾಯ ಗ್ರಾಮದಿಂದ ಬೇರ್ಪಡಿಸಿ, ಸಕ್ರಿಹಳ್ಳಿಯನ್ನು ಹೊಸ ಕಂದಾಯ ಗ್ರಾಮವನ್ನಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಅಡವಿಕ್ಯಾದಿಹಳ್ಳಿ ಕಂದಾಯ ಗ್ರಾಮದಲ್ಲಿರುವ ನಮ್ಮ ಗ್ರಾಮದ ಜನಸಂಖ್ಯೆಯನ್ನು ಸೊನ್ನ ಗ್ರಾ.ಪಂ.ಗೆ ಸೇರ್ಪಡೆ ಮಾಡಬೇಕು. ಬೇಡಿಕೆ ಈಡೇರದಿದ್ದರೆ ಮುಂದಿನ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಮಲ್ಲಿಕಾರ್ಜುನಗೌಡ ಎಚ್ಚರಿಕೆ ನೀಡಿದರು.