ಗ್ರಾಮಸಭೆಗೆ ಗೈರಾದರೆ ಕ್ರಮಕ್ಕೆ ಶಿಫಾರಸು

h24-KDP Meeting 1
Published on

ಹುಬ್ಬಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸಭೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸಲು ಶಿಫಾರಸು ಮಾಡಲಾಗುವುದು ಎಂದು ತಾಪಂ ಇಒ ಗಂಗಾಧರ ಕಂದಕೂರ ಎಚ್ಚರಿಕೆ ನೀಡಿದರು.
ನಗರದ ಮಿನಿವಿಧಾನಸೌಧದ ಸಭಾ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಕುಂದಗೋಳ ಕ್ಷೇತ್ರ ವ್ಯಾಪ್ತಿಯ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ಇದಕ್ಕೆ ದನಿಗೂಡಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ, ಗ್ರಾಮಸಭೆಗೆ ಅಧಿಕಾರಿಗಳು ಹಾಜರಾಗುತ್ತಿಲ್ಲ. ಇದರಿಂದ ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಬಹಳಷ್ಟು ಗ್ರಾಮಸಭೆಗಳು ರದ್ದಾಗಿವೆ. ಅಧಿಕಾರಿಗಳು ಇಲ್ಲವೆ ಅಲ್ಲಿನ ಸಮಸ್ಯೆಗಳ ಪರಿಹಾರ ಬಗ್ಗೆ ಮಾತನಾಡುವ ಸಿಬ್ಬಂದಿಯನ್ನು ಕಡ್ಡಾಯವಾಗಿ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.
ಬಹಳಷ್ಟು ಕೆಲಸಗಳು ನನೆಗುದಿಗೆ ಬಿದ್ದಿವೆ. 2016-17ನೇ ಸಾಲಿನ ಕಾಮಗಾರಿಗಳೇ ನಡೆದಿಲ್ಲ. ಹೀಗಾದರೆ ಹೇಗೆ? ಅಭಿವೃದ್ಧಿ ಪರಿಶೀಲನಾ ಸಭೆ ನೆಪ ಮಾತ್ರಕ್ಕೆ ಆಗಬಾರದು. ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು. ಎಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿವೆಯೋ ಅವುಗಳ ಸ್ಥಳಕ್ಕೆ ನಾನೂ ಬರುವೆ ಎಂದು ಶಾಸಕಿ ಶಿವಳ್ಳಿ ಹೇಳಿದರು.
ಯಾವ ಕಾಮಗಾರಿಗಳು ಪೂರ್ಣಗೊಂಡಿವೆ? ಬಾಕಿ ಉಳಿದ ಹಾಗೂ ಮಾಡಬೇಕಿರುವ ಕಾಮಗಾರಿಗಳ ಕುರಿತು ವಾರದೊಳಗೆ ವರದಿ ಕೊಡುವಂತೆ ಅಧಿಕಾರಿಗಳಿಗೆ ಇಒ ಕಂದಕೂರ ಸೂಚಿಸಿದರು.
ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿ, ಬಹಳಷ್ಟು ವಸತಿ ನಿಲಯಗಳಲ್ಲಿ ಫ್ಯಾನ್​ಗಳಿಲ್ಲ. ಮಳೆಗಾಲ ಇರುವುದರಿಂದ ಸೊಳ್ಳೆಗಳ ಕಾಟ ಮಿತಿ ಮೀರಿದೆ. ಅವರಿಗೆ ಅನಾರೋಗ್ಯ ಕಾಡಿದರೆ ಹೇಗೆ? ಕೂಡಲೆ ವಿದ್ಯಾರ್ಥಿಗಳ ಕೊಠಡಿಗಳಲ್ಲಿ ಫ್ಯಾನ್​ಗಳನ್ನು ಅಳವಡಿಸಲು ಕ್ರಮ ಜರುಗಿಸಬೇಕು ಎಂದು ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿಯನ್ನು ಸಭೆಗೆ ಮಂಡಿಸಿದರು.
ಜಿಪಂ ಇಂಜಿನಿಯರಿಂಗ್ ವಿಭಾಗದ ಎಇಇ ಕೆ.ಬಿ. ಚಾಟೆ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಗಿರೀಶ ಚವ್ಹಾಣ, ಸಿ.ಆರ್. ಅಂಬಿಗೇರ, ದೀಪಾ ಜಾವೂರ, ಶಾರದಾ ತಳವಾರ, ಇತರರು ಇದ್ದರು.
ತಾಸು ತಡವಾಗಿ ಶುರು: ಕೆಡಿಪಿ ಸಭೆ ಬೆಳಗ್ಗೆ 11ಕ್ಕೆ ಏರ್ಪಾಟಾಗಿತ್ತು. ಸಮಯ 11.15 ಆದರೂ ಅಧಿಕಾರಿಗಳು ಹಾಜರಿರಲಿಲ್ಲ. ತಾಪಂ ಇಒ ಗಂಗಾಧರ ಕಂದಕೂರ, ದೂರವಾಣಿ ಮೂಲಕ ಕರೆ ಮಾಡಿ ಅಧಿಕಾರಿಗಳು ಹಾಜರಿರುವಂತೆ ಸೂಚಿಸಿದರು. ಅಧಿಕಾರಿಗಳು ಬಂದ ನಂತರ ಮಧ್ಯಾಹ್ನ 12ಕ್ಕೆ ಶಾಸಕಿ ಕುಸುಮಾವತಿ ಶಿವಳ್ಳಿ ಸಭೆಗೆ ಆಗಮಿಸಿದರು. ‘ಅಧಿಕಾರಿಗಳು ವಿಳಂಬವಾಗಿ ಬಂದರೆ ಹೇಗೆ? ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆಯಲು ತೊಂದರೆ ಆಗುತ್ತದೆ. ನಿಗದಿತ ಸಮಯಕ್ಕೆ ಅಧಿಕಾರಿಗಳು ಹಾಜರಿರಬೇಕು’ ಎಂದು ಶಾಸಕಿ ಶಿವಳ್ಳಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net