

ಕಲಘಟಗಿ: ಪಟ್ಟಣದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವಕ್ಕೆ ಸಹಸ್ರಾರು ಭಕ್ತರು ಹರಿದು ಬರುತ್ತಿದ್ದು, ತಡ ರಾತ್ರಿಯವರೆಗೂ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ. ಜಾತ್ರಾ ಮಂಟಪದ ಸುತ್ತಲೂ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಗೃಹ ವ್ಯವಸ್ಥೆ ಮಾಡಲಾಗಿದೆ. ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11ರಿಂದ ರಾತ್ರಿವರೆಗೆ ಅನ್ನ ದಾಸೋಹ ನಡೆಯುತ್ತಿದೆ. ನಿತ್ಯ ರಾತ್ರಿ 10ಕ್ಕೆ ಮಹಾ ಮಂಗಳಾರತಿ ಬಳಿಕ ಜಾತ್ರಾ ಮಂಟಪದಲ್ಲಿ ಭಕ್ತಿ ಗೀತೆ, ಜಾನಪದ ಗೀತೆ, ಡೊಳ್ಳಿನ ಪದ, ಸೋಬಾನ ಪದ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತಿವೆ. ಪಟ್ಟಣದ ಶ್ರೀ ಲಕ್ಷ್ಮೀ ಗುಡಿ ಹಿಂದಿನ ಮೈದಾನದಲ್ಲಿ ಜಾಯಿಂಟ್ ವ್ಹೀಲ್, ಡ್ರೆಗೊನ್ ಟ್ರೇನ್, ಬ್ರೇಕ್ ಡಾನ್ಸ್, ತಲಂಬೋ ಕೊಲಂಬಸ್, ರೋಲಿಂಗ ಚೇರ್, ಟೋರಾ ಟೋರಾ, ಬಾವಿಯಲ್ಲಿ ಮಾರುತಿ ಕಾರ್, ಮ್ಯಾಜಿಕ್ ಶೋ, ಡ್ಯಾಂಕೀ ಶೋ, ಆಕ್ಟೋಪಸ್ ಜನರನ್ನು ಆಕರ್ಷಿಸುತ್ತಿವೆ. ಮಾ. 12ರಂದು ಮಧ್ಯಾಹ್ನ ನಂತರ ಶ್ರೀ ದೇವಿಯರನ್ನು ಭಕ್ತರು ಪಾದಗಟ್ಟೆಗೆ ಕೊಂಡೊಯ್ದ ನಂತರ ಜಾತ್ರೆ ಸಂಪನ್ನಗೊಳ್ಳಲಿದೆ.