ಗ್ರಾಮದೇವಿಯರ ಜಾತ್ರೆಗೆ ಸಂಭ್ರಮ ತೆರೆ

8GKK1
Published on

ಗೋಕಾಕ: ಹತ್ತು ವರ್ಷಗಳ ನಂತರ ಒಂಬತ್ತು ದಿನಗಳ ಕಾಲ ನಡೆದ ಗೋಕಾಕ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಮಂಗಳವಾರ ಸಂಭ್ರಮದಿಂದ ತೆರೆ ಕಂಡಿತು.

ಜಾತ್ರೆ ಅಂಗವಾಗಿ ಒಂಬತ್ತು ದಿನ ಜನರು ಭಂಡಾರದಲ್ಲಿ ಮಿಂದೆದ್ದರು. ಮೂರು ದಿನಗಳ ಕಾಲ ನಡೆದ ದೇವಿಯರ ರಥೋತ್ಸವ ಭಕ್ತಿಯ ಪರಾಕಾಷ್ಠೆ ಹೆಚ್ಚಿಸಿತ್ತು. ಬೇರೆ ಊರುಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಜಾತ್ರೆಗೆ ಆಗಮಿಸಿ ದೇವಿಯರ ದರ್ಶನ ಪಡೆದು ಪುನೀತರಾದರು.

ನಗರದ ಶ್ರೀ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಮಂಗಳವಾರ ಗ್ರಾಮ ದೇವತೆಯರಿಗೆ ಪುರಜನರಿಂದ ವಿಶೇಷ ಪೂಜೆ, ನೈವೇದ್ಯ ಅರ್ಪಣೆ ಜರುಗಿತು.

ಸ್ಥಳೀಯ ಮೆರಕನಟ್ಟಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಗುರುವಾರ ಪೇಟೆಯ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರು ಸರತಿಯಲ್ಲಿ ನಿಂತು ದೇವಿಯರ ದರ್ಶನ, ಆಶೀರ್ವಾದ ಪಡೆದು ಪುನೀತರಾದರು.

ಜಾತ್ರೆಗೆ ಗಣ್ಯರ ಭೇಟಿ: ನಗರದ ಗ್ರಾಮ ದೇವತೆಯರ ಜಾತ್ರೆಗೆ ಶಾಸಕ ರಮೇಶ ಜಾರಕಿಹೊಳಿ ಆಹ್ವಾನದ ಮೇರೆಗೆ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅನಿಲ ಬೆನಕೆ, ಮಹೇಶ ಕುಮಠಳ್ಳಿ ಸೇರಿ ಬಿಜೆಪಿ ನಾಯಕರು ಆಗಮಿಸಿ ದೇವಿಯರ ದರ್ಶನ ಪಡೆದು, ಪ್ರಸಾದ ಸ್ವೀಕರಿಸದರು. ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಯುವ ನಾಯಕ ಅಮರನಾಥ ಜಾರಕಿಹೊಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net