

ಕಲಘಟಗಿ: ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆಯಲ್ಲೊಂದಾದ ಪಟ್ಟಣದ ಶ್ರೀ ಗ್ರಾಮದೇವಿಯರಾದ ದ್ಯಾಮವ್ವ-ದುರ್ಗವ್ವರ ಜಾತ್ರಾ ಮಹೋತ್ಸವ ಬುಧವಾರದಿಂದ ಅದ್ದೂರಿಯಾಗಿ ಆರಂಭಗೊಂಡಿದೆ.
ನಿಸರ್ಗ ದೇವತೆಯ ಸೆರಗಿನಂಚಿನಲ್ಲಿರುವ ಹಾಗೂ ತೂಗು ತೊಟ್ಟಿಲಿಗೆ ಹೆಸರುವಾಸಿಯಾಗಿರುವ ಪಟ್ಟಣದಲ್ಲಿ ಮೂರು ವರ್ಷಗಳ ಬಳಿಕ ಶ್ರೀ ಗ್ರಾಮದೇವಿಯರ ಜಾತ್ರೆ ಮತ್ತೇ ಬಂದಿದೆ. ಮಂಗಳವಾರ ಶ್ರೀ ಗ್ರಾಮ ದೇವಿ ದೇವಸ್ಥಾನದಲ್ಲಿ ಹೋಮ, ಹವನ, ದೇವಿಯರ ಪ್ರತಿಷ್ಠಾಪನೆ ನಡೆದು ಬಳಿಕ ಬಾಬುದಾರರಿಂದ ಮಾಂಗಲ್ಯ ಧಾರಣೆ (ಗುಡದಾಳ) ಕಾರ್ಯಕ್ರಮ ಜರುಗಿತು.
ಬುಧವಾರ ಬೆಳಗ್ಗೆ ಗ್ರಾಮದೇವಿಯರ ದೇವಸ್ಥಾನದಿಂದ ಆರಂಭಗೊಂಡ ಮೂರ್ತಿಗಳ ಮೆರವಣಿಗೆ ಭಕ್ತರ ಜಯಘೊಷದೊಂದಿಗೆ ಅಕ್ಕಿ ಓಣಿಯಲ್ಲಿರುವ ಚೌತ ಮನೆಕಟ್ಟೆಯ ಜಾತ್ರಾ ಮಂಟಪದವರೆಗೆ ಅದ್ದೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಕರಡಿ ಮಜಲು, ಝಾಂಜ ಮೇಳ, ಚಂಡೆ ಮದ್ದಳೆ, ಹೆಜ್ಜೆ ಮೇಳ, ಲಂಬಾಣಿ ನೃತ್ಯ, ಹಲಗೆ ಮೇಳ, ಸಕಲ ವಾದ್ಯ ಮೇಳಗಳ ಜೊತೆಗೆ ರಾಣಿಗೇರ, ಮಾತಂಗಿಯರು ಮತ್ತು ಜೋಗಮ್ಮಗಳು ಸಾಗಿದರೆ ಸಹಸ್ರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ಬಳಿಕ ಚೌತ ಮನೆಕಟ್ಟೆಯ ದೇವಿಯರಿಬ್ಬನ್ನು ಪ್ರತಿಷ್ಠಾಪಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಬಳಸಿ ಜಾತ್ರೆಗೆ ಬರುವ ಭಕ್ತಾದಿಗಳನ್ನು ತಿರುಪತಿ ತಿರುಮಲನ ಮಹಾದ್ವಾರ ಸ್ವಾಗತಿಸುತ್ತದೆ. ಜಾತ್ರಾ ಮಂಟಪದ ಮಹಾದ್ವಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಾದ್ವಾರದ ತದ್ರೂಪದಂತೆ ನಿರ್ವಿುಸಲಾಗಿದೆ. ಶ್ರೀ ದೇವಿಯರನ್ನು ಪ್ರತಿಷ್ಠಾಪಿಸಿರುವ ಜಾತ್ರಾ ಮಂಟಪವನ್ನು ರಾಜ-ಮಹಾರಾಜರ ಆಸ್ಥಾನದಂತೆ ನಿರ್ವಿುಸಲಾಗಿದೆ.
ಸದ್ಭಕ್ತರಿಗೆ ಸಕಲ ವ್ಯವಸ್ಥೆ
ಜಾತ್ರಾರ್ಥಿಗಳಿಗೆ ಒಂಭತ್ತು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿಯವರೆಗೂ ನಿರಂತರ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ. ನೀರು, ಸ್ವಚ್ಛತೆ ಹಾಗೂ ಬೀದಿ ದೀಪದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಹೆಚ್ಚುವರಿ ಪೊಲೀಸ್ ಹಾಗೂ ಹೋಂ ಗಾರ್ಡ್ಗಳನ್ನು ನೇಮಿಸಲಾಗಿದೆ. ಸೂಕ್ಷ್ಮಹಾಗೂ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಿಡಗೇಡಿಗಳಿಂದ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲಾಗಿದೆ. ಆರೋಗ್ಯ ಇಲಾಖೆಯವರು ಜಾತ್ರಾ ಸ್ಥಳದಲ್ಲಿಯೇ ವೈದ್ಯರು ಹಾಗೂ ಸಿಬ್ಬಂದಿ ಠಿಕಾಣಿ ಹೂಡಿದ್ದಾರೆ. ಹೆಸ್ಕಾಂ ಹಾಗೂ ಅಗ್ನಿಶಾಮಕದವರು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮತ್ತು ಯಾವುದೇ ಅಗ್ನಿ ಅವಘಡಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ದೇವಸ್ಥಾನದ ಟ್ರಸ್ಟ್ ಕಮಿಟಿ, ಶ್ರೀ ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿಯೊಂದಿಗೆ ಸ್ವಯಂಸ್ಪೂರ್ತಿಯಿಂದ ಯುವಕರು, ವಿವಿಧ ಸಂಘ -ಸಂಸ್ಥೆಗಳವರು, ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಉತ್ಸಾಹದಿಂದ ಜಾತ್ರಾ ಉತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
EndFragment