

ಕಿಕ್ಕೇರಿ: ಹೋಬಳಿಯ ಐಕನಹಳ್ಳಿಯ ಗ್ರಾಮದೇವತೆ ಐಕನಳ್ಳಮ್ಮನ ಸಿಡಿ ಜಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು.
ವಾರದವರೆಗೆ ನಡೆದ ಜಾತ್ರೆಯಲ್ಲಿ ದೂರದ ಊರುಗಳಿಂದ ಭಕ್ತರು ಆಗಮಿಸಿದ್ದರು. ನಿತ್ಯ ದೇವಿಗೆ ಪ್ರಿಯವಾದ ನೈವೇದ್ಯವಾದ ಕಾಯಿ ಹಾಲು, ಮೊಳಕೆ ಕಟ್ಟಿದ ಹುರುಳಿಕಾಳು ಸಾರು, ಅನ್ನ, ಶ್ಯಾವಿಗೆ ಎಡೆ ಇಟ್ಟು ಪೂಜಿಸಲಾಯಿತು.
ದೇವಿಯ ಅಂಗರಕ್ಷಕ ಭಂಟರಾದ ಸೋಮನ ಕುಣಿತ, ಚಿಕ್ಕಯ್ಯ, ದೊಡ್ಡಯ್ಯ ದೇವರ ಕುಣಿತ, ಮೆರವಣಿಗೆ, ಬಾಯಿ ಬೀಗದಂತಹ ಹಲವು ಹರಕೆ, ಸೇವೆಗಳು ನಡೆದವು. ತುಳಸಿ ಗ್ರಾಮದ ವೀರಮಕ್ಕಳು ಕತ್ತಿ, ಕೋಲನ್ನು ಹಿಡಿದು ದೇವಿಗೆ ಕೋಲಿನ ಸೇವೆ, ಕತ್ತಿವರಸೆ ಸೇವೆ ಅರ್ಪಿಸಿದರು. ಹಲವರು ಸಿಡಿ ಏರಿ ದೇವರಿಗೆ ಹರಕೆ ಒಪ್ಪಿಸಿದರು. ಗ್ರಾಮದ ಪ್ರತಿ ಮನೆಗಳ ಮುಂದೆ ಚಿಕ್ಕಯ್ಯ, ದೊಡ್ಡಯ್ಯ ದೇವರ, ಲಕ್ಷ್ಮೀದೇವಿ ಅಮ್ಮನವರ ಮೆರವಣಿಗೆ ನಡೆಯಿತು. ವೀರಭದ್ರೇಶ್ವರ ಸ್ವಾಮಿಯನ್ನು ಸ್ಮರಿಸಿ ಭಕ್ತರು ಪೂಜಿಸಿದರು.
ಇಡೀ ಗ್ರಾಮದಲ್ಲಿ ವಿದ್ಯುದೀಪಾಲಂಕಾರ, ತಳಿರು-ತೋರಣ, ರಂಗೋಲಿ ಸಿಂಗಾರ ಮಾಡಲಾಗಿತ್ತು. ದೇವರ ಮೆರವಣಿಗೆ ಮನೆಯ ಮುಂದೆ ಭಕ್ತರು ದೇವರಿಗೆ ಮಕ್ಕಳ ಸಮೇತ ದೀರ್ಘ ದಂಡ ನಮಸ್ಕಾರ ಮಾಡಿದರು. ಆರತಿ ಬೆಳಗಿ, ಹಣ್ಣು, ಕಾಯಿ ಅರ್ಪಿಸಿ, ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು. ಕೆಂಗಪ್ಪನ ವಠಾರದವರು ಜಾತ್ರೆಯ ಉಸ್ತುವಾರಿ ವಹಿಸಿದ್ದರು. ದೇವರ ಮೆರವಣಿಗೆ ಅಂತಿಮವಾಗಿ ತುಳಸಿ ಗ್ರಾಮಕ್ಕೆ ತೆರಳಿತು.