

ಸೊರಬ: ಸಮಾಜಮುಖಿ ಕಾರ್ಯಗಳ ಮೂಲಕ ಸದೃಢ ಸಮಾಜವನ್ನು ನಿರ್ಮಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಆರ್ಥಿಕ ಸಬಲೀಕರಣದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾದರಿಯಾದ ಸಂಸ್ಥೆಯಾಗಿದೆ ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರಘಾಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಶುಕ್ರವಾರ ತಾಲೂಕಿನ ಜಡೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಡೆ ವಲಯ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮಗಳು ಸ್ವಾವಲಂಬಿಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದಾಗ ದೇಶ ಅಭಿವೃದ್ಧಿಯಲ್ಲಿ ಮುಂದುವರಿಯಲು ಸಾಧ್ಯವಿದೆ ಎಂಬ ಕನಸನ್ನು ಹೊಂದಿರುವ ವೀರೇಂದ್ರ ಹೆಗ್ಗಡೆ ಅವರ ಸಕಾರಣ ಪೂರ್ಣವಾದ ಕಲ್ಪನೆ ವಿಕಸನಗೊಳ್ಳಲು ಹಲವು ಕಾರ್ಯಕ್ರಮಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತವೆ. ಕುಟುಂಬಗಳು ಆರ್ಥಿಕವಾಗಿ ಪ್ರಗತಿ ಹೊಂದಬೇಕೆಂಬ ಉದ್ದೇಶದಿಂದ ಸಂಘಗಳ ಮೂಲಕ ಸಾಲ ಸೌಲಭ್ಯ ದೊರಕಿಸಿಕೊಟ್ಟು ಶಿಕ್ಷಣ, ಗೃಹ ನಿರ್ಮಾಣ, ನೂತನವಾದ ಉದ್ಯೋಗಗಳನ್ನು ಕೈಗೊಳ್ಳಲು ಸಾಲ ಸೌಲಭ್ಯ ನೀಡುವುದರೊಂದಿಗೆ ಸಂಯಮದ ಶಿಸ್ತುಬದ್ಧ ಜೀವನವನ್ನು ನಡೆಸಲು ಹಾಗೂ ಬದುಕನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳು ಸರ್ಕಾರಗಳು ಮಾಡಲು ಸಾಧ್ಯವಾಗದೆ ಇರುವ ಕಾರ್ಯಗಳನ್ನು ಮಾಡುವ ಮೂಲಕ ತನ್ನ ಮಹತ್ವವನ್ನು ಉಳಿಸಿಕೊಂಡಿವೆ ಎಂದು ಹೇಳಿದರು.