

ಗುಂಡ್ಲುಪೇಟೆ: ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬಿದರೂ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಮೂಲಸೌಕರ್ಯಗಳ ಕೊರತೆಯಾಗುತ್ತಿದೆ ಎಂದು ಶಾಸಕ ಸಿ.ಎಸ್.ನಿರಂಜಕುಮಾರ್ ಹೇಳಿದರು.
ತಾಲೂಕಿನ ಶೀಲವಂತಪುರ ಗ್ರಾಮದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಸಾಮಾನ್ಯ ವರ್ಗದ ಬೀದಿಗಳಿಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಸ್ತೆ, ಚರಂಡಿ, ಬೀದಿದೀಪ ಹಾಗೂ ಕುಡಿಯುವ ನೀರಿನ ಸರಬರಾಜು ಸೇರಿದಂತೆ ಮೂಲಸೌಕರ್ಯಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಾವು ಶಾಸಕರಾಗಿ ಆಯ್ಕೆಯಾದ ನಂತರ ಗ್ರಾಮಾಂತರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಹಿಂದುಳಿದ ವರ್ಗಗಳ ಜನರ ಬಡಾವಣೆಗಳಿಗೆ ಈಗಾಗಲೇ ಸಿಸಿ ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗಿದೆ. ಇದೀಗ ಸಾಮಾನ್ಯವರ್ಗದ ಬಡಾವಣೆಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುತ್ತಿದೆ. 50 ಗ್ರಾಮಗಳಿಗೆ ತಲಾ 50 ಲಕ್ಷ ರೂ. ವೆಚ್ಚ ಅನುದಾನದಲ್ಲಿ ಸೌಕರ್ಯ ಕಲ್ಪಿಸಲಾಗಿದ್ದು, ಶೀಲವಂತಪುರ ಗ್ರಾಮಕ್ಕೆ 96 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೊಡಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟಮ್ಮ, ಉಪಾಧ್ಯಕ್ಷೆ ಶೋಭಾ, ಸದಸ್ಯರಾದ ಎಪಿಎಂಸಿ ನಿರ್ದೇಶಕ ವೆಂಕಟನಾಯ್ಕ, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ವೀರಶೈವ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಮುಖಂಡರಾದ ಸಿ.ಮಹದೇವಪ್ರಸಾದ್, ಶಶಿ, ತಮ್ಮಣ್ಣ, ಕೆ.ಎಲ್.ಮಹದೇವಸ್ವಾಮಿ ಇತರರು ಇದ್ದರು.