

ಔರಾದ್: ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ರಸ್ತೆ ಮತ್ತು ಚರಂಡಿ ಸೇರಿ ಇನ್ನಿತರ ತೊಂದರೆಯಾಗದಂತೆ ಅಧಿಕಾರಿಗಳು ವಾರಕ್ಕೊಮ್ಮೆ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕಿನ ಹಂಗರಗಾ, ಬೋಂತಿ, ಸಾವರಗಾಂವ, ಬಾವಲಗಾಂವ, ಹೊಕ್ರಾಣಾ, ನಂದಿ ಬಿಜಲಗಾಂವ, ಚೊಂಡಿಮುಖೇಡ, ಚಿಕ್ಲಿ (ಯು), ಅಕನಾಪುರದಲ್ಲಿ ಸೋಮವಾರ ಸಂಚಾರ ನಡೆಸಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಶಾಸಕರು, ವೃದ್ದಾಪ್ಯ ವೇತನ, ವಿಧವಾ ವೇತನ, ಪಿಂಚಣಿ, ಪಡಿತರ ಸೇರಿ ಕೆಲವು ಸಮಸ್ಯೆಗಳಿಗೆ ಶೀಘ್ರ ಪರಿಹರಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸ್ಮಶಾನಭೂಮಿ, ಶಾಲೆ ಆವರಣ ಗೋಡೆ, ಕೃಷಿ ಭೂಮಿಗೆ ಹೋಗುವ ಕಚ್ಚಾ ರಸ್ತೆ, ಸಣ್ಣ-ಪುಟ್ಟ ಸಿಸಿ ರಸ್ತೆಗಳ ಅವಶ್ಯಕತೆಯಿದ್ದಲ್ಲಿ ಗ್ರಾಪಂನಿಂದ ಮಾಡಿಸಬೇಕು. ದೊಡ್ಡ ಕೆಲಸಗಳಿದ್ದರೆ ನನ್ನ ಗಮನಕ್ಕೆ ತರಬೇಕೆಂದು ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು.
ಬಹಳಷ್ಟು ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ದೂರುಗಳು ಬರುತ್ತಿವೆ. ಆಸ್ಪತ್ರೆಗಳಲ್ಲಿ ವೈದ್ಯರೇ ಇರುವುದಿಲ್ಲವೆಂದು ಜನತೆ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನತೆಗೆ ಸರ್ಕಾರಿ ಆಸ್ಪತ್ರೆಗಳೇ ಆಸರೆಯಾಗಿದ್ದು, ಗಡಿ ಭಾಗದಲ್ಲಿರುವ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ನುರಿತ ವೈದ್ಯರು ಮತ್ತು ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು. ಔಷಧಕ್ಕೆ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದರು.
ಹಂಗರಗಾದಲ್ಲಿ ೪.೫ ಲಕ್ಷ ರೂ.ಗಳ ಸಮುದಾಯ ಭವನ, ಬೋಂತಿಯಲ್ಲಿ ೨೫ ಲಕ್ಷ ರೂ.ಗಳ ಸಾರ್ವಜನಿಕ ಶೌಚಗೃಹ, ನಂದಿ ಬಿಜಲಗಾಂವನಲ್ಲಿ ೬ ಲಕ್ಷ ರೂ.ವೆಚ್ಚದಲ್ಲಿ ಹಿರಿಯ ಪ್ರಾಥಮಿಕ ಶಾಲೆ ದುರಸ್ತಿ ಕೆಲಸ, ಚೊಂಡಿಮುಖೇಡ ಹಾಗೂ ಅಕನಾಪುರದಲ್ಲಿ ೧೪ ಲಕ್ಷ ರೂ.ಗಳ ವೆಚ್ಚದಲ್ಲಿ ಶಾಲೆ ಉನ್ನತೀಕರಣ, ಸೋಲಾರ್ ಪೆನಲ್ ಅಳಡಿಸುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಪಂ ಎಡಿ ಶಿವಕುಮಾರ ಘಾಟೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ, ಜೆಸ್ಕಾಂ ಎಇಇ ರವಿ ಕಾರಬಾರಿ, ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಧೂಳಪ್ಪ, ವೆಂಕಟರಾವ ಶಿಂಧೆ, ಮುಖಂಡರಾದ ವಸಂತ ಬಿರಾದಾರ, ಸತೀಶ ಪಾಟೀಲ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಬಾಲಾಜಿ ನಾಯಕ, ಸಂಜು ಮುರ್ಕೆ, ಯೋಗೇಶ ಪಾಟೀಲ, ಶಿವರಾಜ ಅಲ್ಮಾಜೆ, ಝಾಕೀರ್ ಶೇಕ್ ಇತರರಿದ್ದರು.
ಸರ್ಕಾರಿ ಶಾಲೆಗಳನ್ನು ಸರಿಯಾಗಿ ನಡೆಸಿ ದಾಖಲಾತಿ ಹೆಚ್ಚಿಸಬೇಕು. ಮಕ್ಕಳಿಗೆ ಬಿಸಿಯೂಟ, ಪುಸ್ತಕ, ಸಮವಸ್ತ್ರ ವಿತರಣೆ ಅಚ್ಚುಕಟ್ಟಾಗಿ ನಡೆಯಬೇಕು. ಎಸ್‌ಡಿಎಂಸಿ ಸಹಯೋಗದೊಂದಿಗೆ ಶಾಲೆಯ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಶಿಕ್ಷಕರು ಸಮಯ ಪಾಲನೆ ಮಾಡಿ ಸರಿಯಾಗಿ ಪಾಠ ಮಾಡುವಂತೆ ನೋಡಿಕೊಳ್ಳಬೇಕು.
| ಪ್ರಭು ಚವ್ಹಾಣ್, ಶಾಸಕ ಔರಾದ್