

ರಾಣೆಬೆನ್ನೂರ: ತಾಲೂಕಿನ ಹುಲ್ಲತ್ತಿ, ಚಳಗೇರಿ, ಕರೂರ, ಹರನಗಿರಿ ಗ್ರಾಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಇದು ಅಧಿಕಾರಿಗಳು ಮಾಡಿದ ನಿರ್ಬಂಧವಲ್ಲ, ಬದಲಾಗಿ ಗ್ರಾಮಸ್ಥರೇ ತೆಗೆದುಕೊಂಡ ತೀರ್ವನ.
ಕರೊನಾ ವೈರಸ್ ಹರಡುವಿಕೆಯಿಂದ ದೂರವಿರುವ ನಿಟ್ಟಿನಲ್ಲಿ ನಗರ ಪ್ರದೇಶದಿಂದ ಜನ ಬರಬಾರದು ಎಂದು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಅಡ್ಡಲಾಗಿ ಮುಳ್ಳಿನ ಗಿಡಗಳನ್ನು ಇಟ್ಟು ಸಂಪೂರ್ಣ ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಿದ್ದಾರೆ.
‘ಬೆಂಗಳೂರು, ಮಂಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ ಹಾಗೂ ಕೇರಳ, ಗೋವಾಕ್ಕೆ ದುಡಿಯಲು ಹೋದವರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಬರಬೇಕು. ಅಂದಾಗ ಮಾತ್ರ ಗ್ರಾಮದ ಬಾಗಿಲು ತೆರೆಯುತ್ತದೆ’ ಎಂದು ಗ್ರಾಮದ ರಸ್ತೆಗಳನ್ನು ಬಂದ್ ಮಾಡಿರುವ ಫೋಟೋಗಳನ್ನು ವಾಟ್ಸ್ಅಪ್, ಸ್ಟೇಟಸ್ ಹಾಗೂ ಫೆಸ್ಬುಕ್ನಲ್ಲಿ ಬರೆದುಕೊಂಡು ಬೇರೆ ಬೇರೆ ಊರುಗಳಲ್ಲಿರುವ ಜನರಿಗೆ ರವಾನಿಸುತ್ತಿದ್ದಾರೆ.
ಗ್ರಾಮಗಳ ಪ್ರವೇಶಕ್ಕೆ ನಿರ್ಬಂಧ
ಅಕ್ಕಿಆಲೂರ: ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಲ್ಲಿ ಜನರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಅಕ್ಕಿಆಲೂರು- ಬಾಳೂರ ರಸ್ತೆಯನ್ನು ಬಂದ್ ಮಾಡಲಾಗಿದೆ. ಕೂಡಲ ಗ್ರಾಮಸ್ಥರು ಹಾವೇರಿ, ನರೇಗಲ್ಲ-ಹರವಿ ರಸ್ತೆಗಳಿಗೆ, ಮಲಗುಂದ ಗ್ರಾಮಸ್ಥರು ಕೂಸನೂರ, ವಾಸನ ಮತ್ತು ತಿಳವಳ್ಳಿ ಗ್ರಾಮದ ರಸ್ತೆಗಳಿಗೆ ಮುಳ್ಳಿನ ಬೇಲಿ ಹಾಕಿದ್ದಾರೆ.
ಅಕ್ಕಿಆಲೂರ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳು ಸ್ತಬ್ಧವಾಗಿವೆ. ಗುಂಪುಗುಂಪಾಗಿ ಬರುವ ಜನರ ಮೇಲೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಸ್ಥಳೀಯ ಗ್ರಾಪಂನಿಂದ ಪಟ್ಟಣದ ಬ್ಯಾಂಕ್, ಔಷಧಿ ಅಂಗಡಿ, ಎಟಿಎಂ, ರೇಷನ್ ಕೇಂದ್ರಗಳ ಎದುರು 3 ಮೀಟರ್ ಅಂತರದಲ್ಲಿ ವೃತ್ತಾಕಾರದ ಲೈನ್ ಔಟ್ ಹಾಕಿದ್ದಾರೆ. ನೆರೆ ರಾಜ್ಯ ಮತ್ತು ವಿದೇಶದಿಂದ ಪಟ್ಟಣಕ್ಕೆ ಬರುವ ವ್ಯಕ್ತಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವಂತೆ ಗ್ರಾಪಂನಿಂದ ನಿರಂತರವಾಗಿ ಸೂಚಿಸಲಾಗುತ್ತಿದೆ. ಎಲ್ಲ ದೇವಾಲಯಗಳನ್ನು ಬಂದ್ ಮಾಡಲಾಗಿದೆ.
ಪಟ್ಟಣದಲ್ಲಿ ವಾರದ ಸಂತೆ ಕಳೆದ ಎರಡು ವಾರದಿಂದ ನಡೆದಿಲ್ಲ. ಹೀಗಾಗಿ ಪಟ್ಟಣದ ಜನ ರಾತ್ರಿ ವೇಳೆ ಮಲಗುಂದ, ಕಲ್ಲಾಪುರ, ಯಲ್ಲಾಪುರ, ಲಕ್ಷ್ಮೀಪುರ ಮತ್ತಿತರ ಗ್ರಾಮಗಳಿಗೆ ಹೋಗಿ ರೈತರಿಂದ ನೇರವಾಗಿ ತರಕಾರಿ ಖರೀದಿಸತ್ತಿದ್ದಾರೆ.
ಬೈಕ್ಗಳಲ್ಲಿ ಜನರ ಓಡಾಟ ಅಬಾಧಿತ
ಗುತ್ತಲ: ಪಟ್ಟಣದಲ್ಲಿ ಅನೇಕರು ಬೈಕ್ಗಳಲ್ಲಿ ಸುತ್ತಾಟ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪೊಲೀಸರು ಜನತೆಗೆ ಅನಗತ್ಯ ಓಡಾಟ ಮಾಡದಂತೆ ವಿನಂತಿ ಮಾಡುತ್ತಿದ್ದರು. ಜಿಲ್ಲೆಯ ಗಡಿ ಗ್ರಾಮ ಹಾಲಗಿ ಗ್ರಾಮಕ್ಕೆ ಯಾರೂ ಬಾರದಂತೆ ವರದಾ ಸೇತುವೆ ಮೇಲೆ ಗ್ರಾಮಸ್ಥರು ಮುಳ್ಳುಗಳನ್ನು ಇಟ್ಟು ಬಂದ್ ಮಾಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಪೊಲೀಸರ ಸಮ್ಮುಖದಲ್ಲಿ ಕಿರಾಣಿ ಅಂಗಡಿ ತೆರೆದು ನಿರ್ದಿಷ್ಟ ಅಂತರದಲ್ಲಿ ಸರದಿಯಲ್ಲಿ ನಿಂತ ಜನರು ಅಗತ್ಯ ವಸ್ತುಗಳನ್ನು ಪಡೆದುಕೊಂಡರು.
ಆರೋಗ್ಯ ಕೇಂದ್ರಕ್ಕೆ ಎಸ್ಪಿ ಭೇಟಿ
ಬಂಕಾಪುರ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ದೇವರಾಜ ಅವರು ಬುಧವಾರ ಸಂಜೆ ಭೇಟಿ ನೀಡಿ, ಕರೊನಾ ರೋಗ ಹತೋಟಿ ಮತ್ತು ಮುಂಜಾಗ್ರತೆ ಕ್ರಮದ ಕುರಿತು ಮಾಹಿತಿ ಪಡೆದುಕೊಂಡರು.
ಸ್ಥಳೀಯ ಪೊಲೀಸರು ಮತ್ತು ವೈದ್ಯಾಧಿಕಾರಿಗಳ ತಂಡ ಕೈಗೊಂಡ ಮುಂಜಾಗ್ರತೆ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ, ಸಾರ್ವಜನಿಕರು ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳಿಗೆ ಸಹಕರಿಸಬೇಕು ಎಂದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಂದೊಬಸ್ತ್ ಕುರಿತು ಪರಿಶೀಲನೆ ನಡೆಸಿದರು. ಪಿಎಸ್ಐ ಸಂತೋಷ ಪಾಟೀಲ ಮಾಹಿತಿ ನೀಡಿದರು. ಡಿವೈಎಸ್ಪಿ ವಿನೋದ ಮುಕ್ತೆದಾರ, ಸಿಪಿಐ ಬಸವರಾಜ ಹಳಬಣ್ಣವರ, ಡಾ. ಅನಿಲ ಹೊಸಳ್ಳಿ, ಡಾ.ಶರತ್ ಹಂಡೆ, ಡಾ. ಅಬ್ದುಲ್ ಹಲಗೇರಿ ಇತರರು ಇದ್ದರು.
ಮದರಸಾದಲ್ಲಿ ಸಾಮೂಹಿಕ ಪಾಠಕ್ಕೆ ತಡೆ
ಸವಣೂರ: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಲ್ಲಿಸುವಂತೆ ಮೌಲ್ವಿಗಳಿಗೆ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಸೂಚಿಸಿದ್ದಾರೆ. ಪಟ್ಟಣದ ಶುಕ್ರವಾರ ಪೇಟೆ (ಜುಮ್ಮಾ ಬಜಾರ) ಮಸೀದಿ, ನವನಗರ ಹಾಗೂ ಎಸ್.ಎಂ. ಕೃಷ್ಣ ನಗರದ ಮಸೀದಿ ಹಾಗೂ ಮದರಸಾ (ಅರಬ್ಬಿ) ವಸತಿ ಪಾಠಶಾಲೆಗಳಿಗೆ ಬುಧವಾರ ಭೇಟಿ ನೀಡಿ ತಾಕೀತು ಮಾಡಿದರು.
ಬಿಹಾರ ಸೇರಿ ವಿವಿಧ ರಾಜ್ಯಗಳ ಅಂದಾಜು 40ಕ್ಕೂ ಹೆಚ್ಚು ಮಕ್ಕಳು ಶುಕ್ರವಾರಪೇಟೆ ಮದರಸಾ ಹಾಗೂ ನವನಗರದ ಮದರಸಾ (ಅರಬ್ಬಿ) ವಸತಿ ಪಾಠಶಾಲೆಗಳಲ್ಲಿ ನಿತ್ಯ ಪಾಠ ಆಲಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ತಹಸೀಲ್ದಾರ್ ಭೇಟಿ ನೀಡಿದ್ದರು.
ಮದರಸಾಗಳಲ್ಲಿನ ಮಕ್ಕಳ ಆರೋಗ್ಯ ಪರೀಕ್ಷಿಸಬೇಕು, ಹೊರಗೆ ಬಿಡಬಾರದು. ಮದರಸಾಗಳಿಗೆ ಹೊರ ರಾಜ್ಯಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ಏ. 21ರವರೆಗೆ ಪ್ರವೇಶ ನಿಷೇಧಿಸಿ ಅವರ ಪಾಲಕರಿಗೆ ತಿಳಿಸಬೇಕು ಎಂದು ಮನವರಿಕೆ ಮಾಡಿದರು.
ಅಂಗಡಿಗೆ ಮುಗಿಬಿದ್ದ ಜನ
ಪಟ್ಟಣ ಸೇರಿ ತಾಲೂಕಿನ ಗ್ರಾಮಗಳಲ್ಲಿ ಗುರುವಾರ ಬೆಳಗ್ಗೆ 6 ರಿಂದ 10.30 ರವರೆಗೆ ತೆರೆದಿದ್ದ ಅಂಗಡಿಗಳಲ್ಲಿ ತರಕಾರಿ, ದಿನಸಿ ಸೇರಿ ಅವಶ್ಯಕ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದರು. ಸ್ಥಳೀಯ ಪುರಸಭೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಧ್ವನಿವರ್ಧಕ ಮೂಲಕ ಪಟ್ಟಣದ ಪ್ರತಿ ಓಣಿಯಲ್ಲಿ ಸಂಚರಿಸಿ ಕರೊನಾ ವೈರಸ್ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಲಾಯಿತು.
ಬಸವೇಶ್ವರ ಜಾತ್ರೆ ರದ್ದು
ತಾಲೂಕಿನ ಹುರಳೀಕುಪ್ಪಿ ಗ್ರಾಮದಲ್ಲಿ ಮಾ. 28ರಿಂದ ನಿಗದಿಯಾಗಿದ್ದ ಶ್ರೀ ವೀರಭದ್ರೇಶ್ವರರ ಜಾತ್ರೆ ಹಾಗೂ ಜಲ್ಲಾಪೂರ ಗ್ರಾಮದಲ್ಲಿ ಏ. 1ರಿಂದ 3ರವರೆಗೆ ನಡೆಯಬೇಕಿದ್ದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ರದ್ದುಪಡಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಗಳು ತಿಳಿಸಿವೆ.
ನಿಗದಿತ ಸ್ಥಳದಲ್ಲಿ ನಿಂತು ಪಡಿತರ ಖರೀದಿ
ರಟ್ಟಿಹಳ್ಳಿ: ಪಟ್ಟಣದ ಜತನಾ ಬಜಾರದ ಎದುರು ತಹಸೀಲ್ದಾರ್ ಆದೇಶದಂತೆ 1.5 ಮೀಟರ್ ಅಂತರದಲ್ಲಿ ಹಾಕಿದ್ದ ಸ್ಥಳದಲ್ಲಿ ಸರದಿಯಲ್ಲಿ ನಿಂತು ಸಾರ್ವಜನಿಕರು ಪಡಿತರ ಖರೀದಿಸಿದರು.
ಶಾಖೆ ವ್ಯವಸ್ಥಾಪಕ ಎಸ್.ಆರ್. ಬೆಳೂರ ಮಾತನಾಡಿ, ಗ್ರಾಹಕರಿಗಾಗಿ ಕೈತೊಳೆದುಕೊಳ್ಳುಲು ಸೋಪುಗಳ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕಿನ ಬುಳ್ಳಾಪುರ, ಹಳ್ಳೂರ, ಕಮಲಾಪುರ-ಚಿಕ್ಕಕಬ್ಬಾರ ಗ್ರಾಮಕ್ಕೆ ಸಂರ್ಪಸುವ ಎಲ್ಲ ರಸ್ತೆಗಳಿಗೆ ಬೇಲಿ ಹಾಕಿ ಸಂಪರ್ಕ ಸ್ಥಗಿತಗೊಳಿಸಲಾಗಿದೆ.
ಅಗತ್ಯ ವಸ್ತು ಖರೀದಿಗೆ ಅವಧಿ ನಿಗದಿ
ಶಿಗ್ಗಾಂವಿ: ಶಿಗ್ಗಾಂವಿ, ಬಂಕಾಪುರ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಗ್ರಾಮೀಣ ಭಾಗದಲ್ಲಿ ಗ್ರಾ.ಪಂ ಪಿಡಿಒ ಮತ್ತು ಸಿಬ್ಬಂದಿ ಅಂಗಡಿಗಳನ್ನು ಬಂದ್ ಮಾಡಿಸಿ ಜನರು ಅನವಶ್ಯಕವಾಗಿ ಮನೆಯಿಂದ ಹೊರಬರದಂತೆ ಡಂಗುರ ಸಾರಿದ್ದಾರೆ.ಬಂಕಾಪುರದಲ್ಲಿ ಪುರಸಭೆ ಮತ್ತು ಪೊಲೀಸರು ಸಾರ್ವಜನಿಕರಿಗೆ ಪ್ರತಿದಿನ ಬೆಳಗ್ಗೆ 6ರಿಂದ 11 ಗಂಟೆಯವರೆಗೆ ದಿನಸಿ, ಹಾಲು, ಕಾಯಿಪಲ್ಲೆ ಸೇರಿ ಅಗತ್ಯ ವಸ್ತು ಖರೀದಿಸಲು ಅವಧಿ ನಿಗದಿಪಡಿಸಿದ್ದಾರೆ.
ಉರುಸು ಮುಂದೂಡಿಕೆ
ತಾಲೂಕಿನ ತಡಸ ಗ್ರಾಮದಲ್ಲಿ ಸೂಫಿ ಸಂತ ಹಜರತ್ ಸೈಯದ್ ಅಹ್ಮದಶಾಹ ಖಾದ್ರಿ ಬಗದಾದಿ ಅವರ ವಾರ್ಷಿಕ ಉರುಸು ಮಾ. 31ರಂದು ನಿಗದಿಯಾಗಿತ್ತು. ಕರೊನಾ ತಡೆ ಮುಂಜಾಗ್ರತೆ ಕ್ರಮಕ್ಕಾಗಿ ಸರ್ಕಾರದ ಆದೇಶದ ಮೇರೆಗೆ ಮುಂದೂಡಲಾಗಿದೆ ಎಂದು ಉರುಸು ಸಮಿತಿ ತಿಳಿಸಿದೆ.