ಗ್ರಾಮಗಳ ಮೂಲ ಸೌಕರ್ಯಕ್ಕೆ ಆದ್ಯತೆ

19KMD-1
Published on

ಕೆ.ಎಂ.ದೊಡ್ಡಿ: ಕುಡಿಯುವ ನೀರು, ರಸ್ತೆ, ಚರಂಡಿ ವಿದ್ಯುತ್ ಸೇರಿದಂತೆ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡುವ ಜತೆಗೆ ಕ್ಷೇತ್ರದಲ್ಲಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಶಾಸಕ ಕದಲೂರು ಉದಯ್ ಭರವಸೆ ನೀಡಿದರು.


ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನಾನು ಜನರ ಸೇವೆ ಮಾಡಬೇಕೆಂಬ ಆಶಯ ಇಟ್ಟುಕೊಂಡು ಶಾಸಕನಾಗಿದ್ದು, ಪಕ್ಷಾತೀತವಾಗಿ ನನ್ನ ಜತೆ ಎಲ್ಲರೂ ಕೈಜೊಡಿಸಿದರೆ ಕ್ಷೇತ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.


ಮದ್ದೂರು ಕ್ಷೇತ್ರಾದ್ಯಂತ ಇ-ಸ್ವತ್ತುಗಳ ಸಮಸ್ಯೆಗಳು ಎದ್ದು ಕಾಣುತ್ತಿದ್ದು, 45ದಿನದೊಳಗೆ ಜನರಿಗೆ ಇ-ಸ್ವತ್ತು ಮಾಡಿಕೊಡಬೇಕು ಎಂದು ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ವಿನಾಕಾರಣ ಸಾರ್ವಜನಿಕರನ್ನು ವರ್ಷಾನುಗಟ್ಟಲೇ ಕಚೇರಿಗಳಿಗೆ ಅಲೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದೇ ರೀತಿ ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಪ್ರಾಮಾಣಿಕರವಾಗಿ ಕೆಲಸ ಮಾಡುವವರನ್ನು ಗೌರವಿಸುತ್ತೇನೆ. ಅವರ ಜತೆ ಸದಾ ಇರುತ್ತೇನೆ ಎಂದ ಶಾಸಕರು, ರಸ್ತೆ, ಚರಂಡಿ, ಬೀದಿದೀಪ ಹಾಗೂ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಾಗಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.


ನರೇಗಾ ಯೋಜನೆಯಲ್ಲಿ ಕೋಟ್ಯಂತರ ರೂ. ಅನುದಾನ ಲಭ್ಯವಿದ್ದು, ಅದನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಮಾಡಬೇಕು. ಶಾಲೆಗಳಲ್ಲಿ ಶೌಚಗೃಹಗಳನ್ನು ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು. ಯಲಾದಹಳ್ಳಿ ಗ್ರಾಮದ ಬಳಿಕ ಹನುಮಂತನಗರ, ಬಿದರಹೊಸಹಳ್ಳಿ, ಮಣಿಗೆರೆ ಗ್ರಾಮಗಳಲ್ಲಿ ಜನಸಂಪರ್ಕ ಸಭೆ ನಡೆಸಿದರು.


ಮನ್ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಬಸವರಾಜು, ಮಾಜಿ ಸದಸ್ಯರಾದ ಎ.ಎಸ್.ರಾಜೀವ್, ತಾಪಂ ಮಾಜಿ ಸದಸ್ಯರಾದ ವೈ.ಎಂ.ಬೋರೇಗೌಡ, ದ್ಯಾವೇಗೌಡ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾಪಂ ಅಧ್ಯಕ್ಷ ಕದಲೂರು ತಿಮ್ಮೇಗೌಡ, ತಾಪಂ ಇಒ ಸಂದೀಪ್, ಬಿಇಒ ಕಾಳೀರಯ್ಯ, ತಾಲೂಕು, ಹೋಬಳಿ ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net