ಗ್ರಾಮಗಳ ಪರಿಮಿತಿಯೊಳಗೆ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿ

IMG-4619
ನಾಗಮಂಗಲ ಪಟ್ಟಣದ ಮಂಡ್ಯ ವೃತ್ತದಲ್ಲಿ ಮಾಗಡಿ-ಜಲಸೂರು ಮಾರ್ಗದ ಕೆಶಿಫ್ ರಸ್ತೆ ಕಾಮಗಾರಿಯನ್ನು ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳ ತಂಡದೊಂದಿಗೆ ಪರಿಶೀಲಿಸಿದರು.
Published on

ನಾಗಮಂಗಲ: ಗ್ರಾಮಗಳ ಪರಿಮಿತಿಯೊಳಗೆ ರಸ್ತೆ ನಿರ್ಮಾಣ ಮಾಡುವಾಗ ಅಲ್ಲಿನ ಮನೆಗಳಿಗಿಂತ ರಸ್ತೆ ಹೆಚ್ಚು ಎತ್ತರವಾಗದಂತೆ, ನೀರು ಚರಂಡಿಗೆ ಸೇರುವಂತೆ ಮತ್ತು ತಿರುವುಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕೆಶಿಫ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನಲ್ಲಿ ಹಾದು ಹೋಗಿರುವ ಮಾಗಡಿ- ಜಲಸೂರು ಮಾರ್ಗದ ಕೆಶಿಫ್ ರಸ್ತೆ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಬುಧವಾರ ಪರಿಶೀಲನೆ ನಡೆಸಿ ಮಾತನಾಡಿದರು.

ದೇವಲಾಪುರ ಗ್ರಾಮದಲ್ಲಿ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ಚರಂಡಿ ಎತ್ತರವಾಗಿರುವ ಪರಿಣಾಮ ರಸ್ತೆ ಬದಿ ನೀರು ಹಾಗೂ ಗ್ರಾಮದಲ್ಲಿನ ಮಳೆ ನೀರು ಚರಂಡಿಗೆ ಸೇರುತ್ತಿಲ್ಲ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಈ ಸಂದರ್ಭ ಸಚಿವ ಚಲುವರಾಯಸ್ವಾಮಿ ಸ್ಥಳ ಪರಿಶೀಲನೆ ನಡೆಸಿ ಚರಂಡಿಗಳಿಗೆ ನೀರು ಸೇರುವಂತೆ ಕ್ರಮವಹಿಸಬೇಕು. ಅಲ್ಲದೇ, ಎತ್ತರಕ್ಕೆ ಚರಂಡಿ ನಿರ್ಮಾಣ ಮಾಡಿದ ಕಡೆಗಳಲ್ಲಿ ನೀರು ಚರಂಡಿ ಸೇರುವಂತೆ ಕೂಡಲೇ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಕೆಶಿಫ್ ರಸ್ತೆಯನ್ನು ಮುಂದಿನ 6 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಕೆಲವೆಡೆ ಅರಣ್ಯ ಇಲಾಖೆಗೆ ಸೇರಿದ ಜಮೀನಿರುವುದರಿಂದ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ. ಇನ್ನೂ ಕೆಲವೆಡೆ ಭೂಸ್ವಾಧೀನದ ಸಮಸ್ಯೆಗಳಿದ್ದು, ಎಲ್ಲವನ್ನೂ ರಾಜ್ಯ ಮಟ್ಟದ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಪಟ್ಟಣದ ಹೊರವಲಯದಲ್ಲಿರುವ ದೇವಲಾಪುರ ಹ್ಯಾಂಡ್‌ಪೋಸ್ಟ್ ಬಳಿ ಗಾರ್ಮೆಂಟ್ಸ್ ಸ್ಥಾಪನೆಗೆ ಸ್ಥಳ ನಿಗದಿ ಮಾಡಿ ಕಾಯ್ದಿರಿಸಬೇಕು. ಅಲ್ಲದೇ ತಾಲೂಕಿಗೆ ಕೃಷಿ ಕಾಲೇಜು ಹಾಗೂ ಕೈಗಾರಿಕೆಗಳನ್ನು ತರಲು ಪ್ರಯತ್ನಿಸುತ್ತಿದ್ದು ಅವುಗಳಿಗೆ ಜಮೀನು ಮೀಸಲಿಡುವಂತೆ ಡಿಸಿ, ತಹಸೀಲ್ದಾರ್‌ಗೆ ಸೂಚಿಸಿದರು.
ಪಟ್ಟಣದ ಸೂಳೆಕೆರೆ ಸಮೀಪ ರಸ್ತೆ ಕಾಮಗಾರಿ ನಿಂತಿರುವುದರ ಕುರಿತಾಗಿ ಮಾಹಿತಿ ಪಡೆದ ಸಚಿವರು, ಅಕ್ರಮ ಶೆಡ್‌ಗಳನ್ನು ತೆರವುಗೊಳಿಸುವುದರ ಜತೆಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಯಾಗಿರುವ ಫಲಾನುಭವಿಗಳ ಆಸ್ತಿ ವಿವರ, ನಿವೇಶನಗಳ ವಿವರ ಸೇರಿದಂತೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸುವಂತೆ ತಹಸೀಲ್ದಾರ್‌ಗೆ ಸೂಚಿಸಿದರು.

ಪುರಸಭೆಯ ಸೂಪರ್ ಮಾರ್ಕೆಟ್ ಬಳಕೆಯಾಗದಿರಲು ಕಾರಣವೇನು ಎಂದು ಮುಖ್ಯಾಧಿಕಾರಿ ಶ್ರಿನಿವಾಸ್ ಅವರನ್ನು ಪ್ರಶ್ನಿಸಿದಾಗ, 12 ಅಂಗಡಿಗಳನ್ನು 30-40 ಸಾವಿರ ರೂ. ಬಾಡಿಗೆಗೆ ಹರಾಜು ಕೂಗಿದ್ದು ಅಗ್ರಿಮೆಂಟ್ ಕೂಡ ಆಗಿದೆ. ಆದರೆ ಅವರು ಮಾರ್ಕೆಟ್ ಎದುರಿರುವಂತಹ ಬೀದಿಬದಿಯ ಅಂಗಡಿಗಳನ್ನು ತೆರವುಗೊಳಿಸಿದರೆ ಬಾಡಿಗೆಗೆ ಬರುವುದಾಗಿ ಹೇಳುತ್ತಿದ್ದಾರೆ ಎಂದಯ ಉತ್ತರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೀದಿಬದಿ ವ್ಯಾಪಾರಸ್ಥರಿಗೆ ಒಂದು ವ್ಯವಸ್ಥೆ ಕಲ್ಪಿಸಿ ನಂತರ ಕ್ರಮವಹಿಸಲಾಗುವುದು. ಅಲ್ಲದೇ, ಈ ವಿಚಾರವಾಗಿಯೇ ಒಂದು ದಿನ ಪರಿಶೀಲಿಸಲಾಗುವುದು. ಸೂಪರ್ ಮಾರ್ಕೆಟ್ ಮುಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ್, ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ನಯೀಂ ಉನ್ನಿಸಾ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಡಿವೈಎಸ್ಪಿ ಲಕ್ಷ್ಮೀನಾರಾಯಣಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಲಕ್ಷ್ಮೀನಾರಾಯಣ, ಶರತ್ ರಾಮಣ್ಣ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net