ಗ್ರಾಮಗಳ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕಾರ ನೀಡಿ: ಶಾಸಕ ಕುಮಾರ್ ಬಂಗಾರಪ್ಪ ಸಲಹೆ; 17.61 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ

SOR WEEED
Published on

ಸೊರಬ: ಗ್ರಾಮದಲ್ಲಿ ನಡೆಯುವ ಕಾಮಗಾರಿಗಳಿಗೆ ಗ್ರಾಮಸ್ಥರು ಪಕ್ಷಬೇಧ ಮರೆತು ಸಹಕಾರ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.

ಗುರುವಾರ ತಾಲೂಕಿನ ಬಿಳವಾಣಿ, ಮಾವಲಿ, ಚಿಟ್ಟೂರು, ಇಂಡುವಳ್ಳಿ, ಶಿಗ್ಗಾ, ಮಳಲಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 17.61 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಹಗಲಿರಳು ಶ್ರಮಿಸುತ್ತಿದ್ದು ಸರ್ಕಾರದಿಂದ ವಿವಿಧ ಇಲಾಖೆಗಳಡಿ ಬಿಡುಗಡೆಗೊಂಡಿರುವ ಅನುದಾನವನ್ನು ಕ್ರೋಡೀಕರಿಸಿ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ. ಗ್ರಾಮಸ್ಥರು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಸೌಹಾರ್ದತೆಯಿಂದ ವರ್ತಿಸಿ ಗುಣಮಟ್ಟದ ಕಾಮಗಾರಿ ನಡೆಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಾಲೂಕಿನ ಆನವಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆಗಳು ಪೂರ್ಣಗೊಳಿಸಲಾಗಿದ್ದು ಉಳವಿ ಹೋಬಳಿ ವ್ಯಾಪ್ತಿಯಲ್ಲಿ ಯಾವುದೇ ನದಿಗಳು ಇಲ್ಲವಾದ ಕಾರಣ ಕುಡಿಯುವ ನೀರು ಹಾಗೂ ಕೃಷಿಗಾಗಿ ಕೆರೆ ತುಂಬಿಸುವ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರು ಮತ್ತು ಕಲ್ಲೊಡ್ಡು ಯೋಜನೆ ಸದ್ಬಳಕೆ ಮಾಡಿಕೊಂಡು ಈ ಭಾಗದ ನೀರಾವರಿ ಸಮಸ್ಯೆ ಇತ್ಯರ್ಥಪಡಿಸಲಾಗವುದು ಎಂದು ತಿಳಿಸಿದರು.

ಹಲವು ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಸ್ಮಾಶನ ಭೂಮಿ ಸಮಸ್ಯೆ ಇರುವುದರಿಂದ ಆಯಾ ಗ್ರಾಮಗಳಲ್ಲಿ ಭೂಮಿ ಮೀಸಲಿಡುವ ಸಂಬಂಧ ಕಾನೂನು ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಸ್ವತ್ತುಗಳ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರ ಹೊಣೆಯಾಗಿದ್ದು ಸಾರ್ವಜನಿಕರು ಅಧಿಕಾರಿಗಳ ಜೊತೆ ಕೈಜೋಡಿಸಬೇಕು ಎಂದರು.

ಕೆರೆಗಳಲ್ಲಿನ ಹೂಳೆತ್ತಲು ಕೆರೆ ಸಮಿತಿ ರಚಿಸಿಕೊಂಡು ಹೂಳನ್ನು ಬೇರೆಡೆ ಸ್ಥಳಾಂತರಿಸಲು ಗ್ರಾಮಸ್ಥರು ಮುಂದಾಗಬೇಕು. ಜೆಸಿಬಿಯನ್ನು ತಾಲೂಕು ಆಡಳಿತದಿಂದ ಒದಗಿಸಲಾಗುವುದು. ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಪಡೆಯಬೇಕಾದರೆ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ರಚಿಸಿಕೊಂಡಾಗ ಮಾತ್ರ ಸರ್ಕಾರದಿಂದ ಅನುದಾನ ಕೊಡಿಸಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net