ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳ ನಿರ್ಲಕ್ಷೃ

25 mlv 1
ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ರೇಷ್ಮೆ ಇಲಾಖೆಯಿಂದ ದೊರೆಯುವ ಸವಲತ್ತುಗಳ ಜಾಗೃತಿ ಫಲಕವನ್ನು ಗ್ರಾಪಂ ಅಧ್ಯಕ್ಷ ಚಲುವರಾಜು ಬಿಡುಗಡೆ ಮಾಡಿದರು. ಮಂಜುನಾಥ್, ಲಿಂಗರಾಜು ಶೈಲಜಾ, ಕಿರಣ್, ಮಂಜು ಭೈರೇಶ್, ಚಿಕ್ಕಣ್ಣ ಇದ್ದರು.
Published on

ಮಳವಳ್ಳಿ; ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಿನ್ನಡೆಗೆ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ನಿರ್ಲಕ್ಷೃ ಕಾರಣ ಎಂದು ಹಾಡ್ಲಿ ಗ್ರಾಪಂ ಅಧ್ಯಕ್ಷ ಚೆಲುವರಾಜು ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ನರೇಗಾ ಮತ್ತು 15ನೇ ಹಣಕಾಸು ಯೋಜನೆಗಳ ಸಾಮಾಜಿಕ ಪರಿಶೋಧನೆ ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಪಿಎಚ್‌ಸಿ ಕೇಂದ್ರಗಳ ತೊಂದರೆ, ಜನಸಾಮಾನ್ಯರು ಎದುರಿಸುತ್ತಿರುವ ಮೂಲ ಸೌಕರ್ಯ ಕೊರತೆ ಕುರಿತು ಎನ್‌ಆರ್‌ಎಲ್ ಬ್ಲಾಕ್ ಸಂಜೀವಿನಿ ಒಕ್ಕೂಟ ಸದಸ್ಯರು ಸಲ್ಲಿಸಿದ ಮನವಿಗೆ ಸ್ಪಂದಿಸಿ ಮಾತನಾಡಿದರು.

ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿ ಹೊಂದಿದಂತೆ ಎಂದು ಮಹಾತ್ಮ ಗಾಂಧೀಜಿ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಂಚಾಯತ್ ರಾಜ್ ಇಲಾಖೆಯ ಮೂಲಕ ವಿವಿಧ ಜನಪರ ಯೋಜನೆಗಳನ್ನು ಜಾರಿಗೊಳಿಸಿವೆ. ಆದರೆ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಾದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ನಿರ್ಲಕ್ಷೃದಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯ ಕುಂಠಿತವಾಗಿವೆ ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳ ನಿವಾರಣೆ ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಬೇಕೆಂಬ ಸರ್ಕಾರದ ನಿಯಮ ಇದೆ. ಆದರೆ ಗ್ರಾಮ ಸಭೆಗಳಿಗೆ ಕೆಲವರು ತಮ್ಮ ಇಲಾಖೆಯ ಸಹಾಯಕರನ್ನು ಕಳುಹಿಸಿದರೆ ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಸಭೆಗಳಿಗೆ ಹಾಜರಾಗುವುದೇ ಇಲ್ಲ. ಇದರಿಂದ ಗ್ರಾಮ ಸಭೆಯ ಮೂಲ ಉದ್ದೇಶವೇ ಅರ್ಥಹೀನವಾಗುತ್ತಿದೆ ಎಂದು ಕಿಡಿಕಾರಿದರು.

ಮುಂದಿನ ಸಭೆಗಳಿಗಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಾಗುವ ಮೂಲಕ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸಭಾ ನಿರ್ಣಯ ಮಾಡಿ ಅಧಿಕಾರಿಗಳ ವಿರುದ್ಧ ವರದಿ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಹಾಜರಾಗಿದ್ದ ರೆಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಹಾಯಕ ಅಧಿಕಾರಿಗಳ ತಮ್ಮ ಇಲಾಖೆಗಳಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಮಂಜುನಾಥ್, ಪಿಡಿಒ ಲಿಂಗರಾಜು, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಶೈಲಜಾ, ರೇಷ್ಮೆ ಇಲಾಖೆ ಅಧಿಕಾರಿ ಕಿರಣ್, ಗ್ರಾಪಂ ಸದಸ್ಯರಾದ ಮಂಜು ಭೈರೇಶ್, ಚಿಕ್ಕಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net