

ಹೊಸನಗರ: ಹೊರ ಊರಿನಲ್ಲಿ ನೆಲೆಸಿ ಗ್ರಾಮಕ್ಕೆ ಬರುವವರ ಮಾಹಿತಿ ಕ್ರೋಡೀಕರಿಸಿ ಸಂಜೆ 5 ಗಂಟೆಯೊಳಗೆ ತಾಲೂಕು ಆಡಳಿತಕ್ಕೆ ಮಾಹಿತಿ ನೀಡುವಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಲೂಕು ಆಡಳಿತ ಖಡಕ್ ಸೂಚನೆ ನೀಡಿದೆ.
ಕರೊನಾ ವೈರಸ್ ಹರಡದಂತೆ ಕೈಗೊಳ್ಳುವ ಕ್ರಮಗಳ ಕುರಿತು ಸೋಮವಾರ ತಾಲೂಕು ಆಡಳಿತ ತಹಸೀಲ್ದಾರ್ ವಿ.ಎಸ್.ರಾಜೀವ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಿದರು. ಗ್ರಾಮಗಳಿಗೆ ವಿದೇಶ, ಹೊರ ರಾಜ್ಯ, ಬೇರೆ ಜಿಲ್ಲೆಗಳಿಂದ ಯಾರೇ ಬಂದರೂ ಅವರ ಬಗ್ಗೆ ಮಾಹಿತಿ ಕಲೆಹಾಕಬೇಕು ಎಂದು ಸೂಚಿಸಿದರು.
ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಹಯೋಗದೊಂದಿಗೆ ಮಾಹಿತಿ ಪಡೆದು ಪ್ರತಿದಿನ ಸಂಜೆಯೊಳಗೆ ಮೇಲಧಿಕಾರಿಗೆ ಮಾಹಿತಿ ನೀಡಬೇಕು. ವ್ಯಕ್ತಿಗಳ ಬಗ್ಗೆ ಸಂಶಯ ಬಂದಲ್ಲಿ ಅವರ ಚಲನವಲನದ ಬಗ್ಗೆ ನಿಗಾ ಇಡಬೇಕು.
ಹಕ್ಕಿಜ್ವರ ಕಂಡುಬಂದ ಹಿನ್ನೆಲೆಯಲ್ಲಿ ಕೋಳಿ, ಕೋಳಿ ಮಾಂಸ ವಿತರಣೆ ಮತ್ತು ಸಾಗಣೆ ನಿಷೇಧಿಸಲಾಗಿದೆ. ಮಾರಾಟ ಮಾಡುವ ಅಂಗಡಿಗಳು ಕಂಡುಬಂದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ಸಭೆ ತೀರ್ವನಿಸಿತು.
ಹೊಸನಗರದಲ್ಲಿ ಇಲ್ಲ ಕರೊನಾ: ತಾಲೂಕಿಗೆ ಈವರೆಗೆ ಹೊರದೇಶದಿಂದ 2, ಬೆಂಗಳೂರಿನಿಂದ 19 ಜನ ಬಂದಿದ್ದು ಅವರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗೆ ಕರೊನಾ ಸೋಂಕು ಪತ್ತೆಯಾಗಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಸುರೇಶ ನಾಯ್್ಕ ಸಭೆಗೆ ತಿಳಿಸಿದರು.
ಔಷಧ ಅಂಗಡಿಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಅಲಭ್ಯತೆ ಕಂಡುಬಂದಿದ್ದು ಡಿಎಚ್ಒಗೆ ದೂರವಾಣಿ ಕರೆ ಮಾಡಿ ತುರ್ತಾಗಿ ಒದಗಿಸುವಂತೆ ಮನವಿ ಮಾಡಲಾಯಿತು.
ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಓಡಾಡಲು ವಾಹನ ಕೊರತೆ ಇದ್ದು, ಎಪಿಎಂಸಿಯಲ್ಲಿರುವ ವಾಹನ ಬಳಸಿಕೊಳ್ಳಲು ತೀರ್ವನಿಸಲಾಯಿತು. ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರುವಂತೆ ಡಿಸಿ ಆದೇಶವಿದ್ದು ಕಟ್ಟುನಿಟ್ಟಾಗಿ ಪಾಲಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
ತಾಪಂ ಇಒ ಪ್ರವೀಣ್ಕುಮಾರ್, ಪಪಂ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಉಪ ತಹಸೀಲ್ದಾರ್ಗಳಾದ ವೆಂಕಟೇಶ್, ಲೋಹಿತ್ ಇತರರಿದ್ದರು.