ಗ್ರಾಮಕ್ಕೆ ಬಂದ ಒಂಟಿ ಸಲಗ

nrp elephant
Published on

ಎನ್.ಆರ್.ಪುರ: ಕೆಲವು ದಿನಗಳಿಂದ ಮರೆಯಾಗಿದ್ದ ಕಾಡಾನೆಗಳ ಕಾಟ ಮತ್ತೆ ಆರಂಭವಾಗಿದ್ದು, ಶುಕ್ರವಾರ ಮುತ್ತಿನಕೊಪ್ಪ ಗ್ರಾಮದ ಚಬ್ಬೆನಾಡು, ಜಂಬಳ್ಳಿ, ಕುಶಾಲಪುರದಲ್ಲಿ ರೇಡಿಯೋ ಕಾಲರ್ ಅಳವಡಿಸಿದ್ದ ಒಂಟಿ ಆನೆ ವಸತಿ ಪ್ರದೇಶದಲ್ಲೇ ಸುತ್ತಾಡಿ ಜನರಲ್ಲಿ ಆತಂಕ ಸೃಷ್ಟಿಸಿತು.

ಶುಕ್ರವಾರ ಲಕ್ಕವಳ್ಳಿಯ ಭದ್ರಾ ಹಿನ್ನೀರಿನ ಕಡೆಯಿಂದ ದೇವಗಲ್ ಎಸ್ಟೇಟ್, ಹೊಸಕೊಪ್ಪ ಮಾರ್ಗವಾಗಿ ಮಡಬೂರಿಗೆ ಬಂದು ಬೆಳಗಿನ ಜಾವ ಚಬ್ಬೆನಾಡಿನ ಸಿ.ಡಿ.ಶ್ರೀನಿವಾಸ ಎಂಬುವರ ತೋಟದಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಆನೆ ಬಂದಿರುವುದಾಗಿ ಅರಣ್ಯ ಇಲಾಖೆ ಹಾಗೂ ಎಲಿಫೆಂಟ್ ಟಾಸ್ಕ್‌ಫೋರ್ಸ್‌ಗಳಿಗೆ ತಿಳಿಸಲಾಯಿತು. ಸ್ಥಳಕ್ಕೆ ಆಗಮಿಸಿದ ಟಾಸ್ಕ್‌ಫೋರ್ಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಆನೆಯನ್ನು ಕಾಡಿಗೆ ಅಟ್ಟಲು ಕಾರ್ಯಾಚರಣೆ ಪ್ರಾರಂಭಿಸಿದರು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಡಾನೆ ಕುಶಾಲಪುರಕ್ಕೆ ಆಗಮಿಸಿ ಶಾಲೆ ಗೇಟು ಮುರಿದು ಅಂಗನವಾಡಿ ಸಮೀಪವೇ ಹಾದು ಹೋಗಿ ಮುಖ್ಯರಸ್ತೆ ದಾಟಿದೆ. ಈ ಸಂದರ್ಭದಲ್ಲಿ ನೂರಾರು ಜನರು ಕಾಡಾನೆಯ ಓಡಾಟವನ್ನು ವೀಕ್ಷಿಸಿದರು. ನಂತರ ಒಂಟಿ ಸಲಗ ಸಾತ್ಕೋಳಿ ಮೂಲಕ ಆರಂಬಳ್ಳಿ ಮೀಸಲು ಅರಣ್ಯಕ್ಕೆ ಸೇರಿಕೊಂಡಿತು.

ಸ್ಥಳಕ್ಕೆ ಎನ್.ಆರ್.ಪುರ ವಲಯ ಅರಣ್ಯಾಧಿಕಾರಿ ಪ್ರವೀಣ್, ಮಡಬೂರು ವೃತ್ತದ ಉಪ ವಲಯ ಅರಣ್ಯಾಧಿಕಾರಿ ವೀಣಾ, ಅರಣ್ಯ ರಕ್ಷಕ ತಬರೇಜ್, ಮುತ್ತಿನಕೊಪ್ಪ ವೃತ್ತದ ಉಪ ವಲಯ ಅರಣ್ಯಾಧಿಕಾರಿ ಅರುಣ ಬಾರಂಗಿ, ಗಸ್ತುಪಾಲಕ ರಾಘವೇಂದ್ರ, ಲಕ್ಕವಳ್ಳಿಯ ವೈಡ್ ಅರಣ್ಯಾಧಿಕಾರಿಗಳು ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net