

ತುಮಕೂರು: ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಗ್ರಾಮ ಒನ್ ಕೇಂದ್ರಗಳಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್ಕೆ) ಕಾರ್ಡ್ ಮಾಡಿಕೊಡಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳ ಜತೆ ಆನ್ಲೈನ್ ಮೂಲಕ ಆಯೋಜಿಸಿದ್ದ ಸಭೆಯಲ್ಲಿ ಗ್ರಾಮ ಒನ್ ಕೇಂದ್ರಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ನಿರ್ದೇಶನ ನೀಡಿದರು.
ಗ್ರಾಮ ಒನ್ ಕೇಂದ್ರಗಳು ಜನೋಪಯೋಗಿ ಎನಿಸಿಕೊಳ್ಳುವಂತೆ ಆಯಾ ತಹಸೀಲ್ದಾರರು ನಿಗಾವಹಿಸಬೇಕು, ಎಬಿಎಆರ್ಕೆ ಕಾರ್ಡ್ ವಿತರಿಸಲು ತಾಲೂಕ್ ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದರು.
15 ರಿಂದ 17 ವಯಸ್ಸಿನೊಳಗಿನವರ ಲಸಿಕಾಕರಣ ಮುಂದುವರಿದಿದ್ದು, ಮೊದಲ ಡೋಸ್ ಶೇ.77 ಹಾಗೂ ಎರಡನೇ ಡೋಸ್ ಶೇ.66 ಪೂರ್ಣಗೊಂಡಿದೆ. ಲಸಿಕಾಕರಣ ತೀವ್ರಗತಿಯಲ್ಲಿ ಹೆಚ್ಚಿಸಿ ಶೇ.100 ಪೂರ್ಣಗೊಳಿಸಬೇಕು ಎಂದು ಆರೋಗ್ಯಾಧಿಕಾರಿಗೆ ಸೂಚಿಸಿದರು.
ಕರೊನಾ ತಡೆಗಟ್ಟುವುದಕ್ಕಾಗಿ 12 ರಿಂದ 14 ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು ಮೊದಲ ಡೋಸ್ ಶೇ.58 ಪೂರ್ಣಗೊಂಡಿದೆ, ತಾಲೂಕು ವೈದ್ಯಾಧಿಕಾರಿಗಳು ಶಿಕ್ಷಣಾಧಿಕಾರಿಗಳ ಚರ್ಚಿಸಿ ಹೆಚ್ಚು ಮಕ್ಕಳಿರುವ ಕಡೆ ಲಸಿಕಾ ಕೇಂದ್ರ ತೆರೆಯಬೇಕು. 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕಾಕರಣ ಮೊದಲ ಡೋಸ್ ಶೇ.100 ಗುರಿ ಸಾಧಿಸಲಾಗಿದ್ದು, ಎರಡನೇ ಡೋಸ್ ಶೇ.100 ಪೂರ್ಣಗೊಳಿಸಲು ಡಿಸಿ ಸೂಚಿಸಿದರು.
ಜಿಲ್ಲೆಯಲ್ಲಿ ಎಲ್ಲ ಗ್ರಾಮಗಳಿಗೂ ಸ್ಮಶಾನ ಭೂಮಿ ಕಾಯ್ದಿರಿಸಲು ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮ ಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಸ್ಮಶಾನ ಜಾಗದ ಮಾಹಿತಿ ಪಡೆದು ಫಲಕ ಅಳವಡಿಸಲು ಸೂಕ್ತ ಕ್ರಮವಹಿಸಲು ಆಯಾ ತಹಸೀಲ್ದಾರ್ ಹಾಗೂ ತಾಪಂ ಇಒಗೆ ಸೂಚಿಸಿದರು.
ಅಂಗನವಾಡಿಗಳಿಗೆ ನಿವೇಶನ ಗುರುತಿಸಿ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ನಿವೇಶನ ಒದಗಿಸುವ ನಿಟ್ಟಿನಲ್ಲಿ ಖಾಲಿ ಇರುವ ಜಾಗಗಳನ್ನು ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಅಂಗನವಾಡಿ ಕಾರ್ಯಕರ್ತೆಯರು ಜಾಗವನ್ನು ಗುರುತಿಸಬೇಕು. ನಗರ ಪ್ರದೇಶಗಳಲ್ಲಿ ಸರ್ಕಾರಿ ಕಟ್ಟಡ, ಸಮುದಾಯ ಭವನಗಳಿದ್ದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸಲು ಇಲ್ಲವೆ ನಿವೇಶನ ಪಡೆದುಕೊಳ್ಳಲು ಪಾಲಿಕೆ ಮತ್ತು ಟೂಡಾ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಅಂಜನಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ಪಾಲಿಕೆ ಆಯುಕ್ತೆ ರೇಣುಕಾ, ತಹಸೀಲ್ದಾರ್ ಮೋಹನಕುಮಾರ್, ಡಿಎಚ್ಒ ಡಾ.ನಾಗೇಂದ್ರಪ್ಪ ಮತ್ತಿತರರು ಇದ್ದರು.