

ನರೇಗಲ್ಲ: ಸಮೀಪದ ಮಾರನಬಸರಿ ಗ್ರಾಮದಲ್ಲಿ ಕಸ ವಿಲೇವಾರಿ ಬಗ್ಗೆ ಗ್ರಾಮಸ್ಥರಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ., ಕಂದಕೂರು ಹಾಗೂ ತಂಡವು ಗುರುವಾರ ಗ್ರಾಮದ ಸ್ವಚ್ಛತೆ ಹಾಗೂ ಕಸ ವಿಲೇವಾರಿ ಕುರಿತು ಗ್ರಾಮಸ್ಥರಿಗೆ ಜಾಗೃತಿ ಮೂಡಿಸಿತು.
ಗ್ರಾಪಂ ಅಧ್ಯಕ್ಷ ವೀರಣ್ಣ ಮರಡಿ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಹಾಗೂ ಪಿಡಿಒ ಎಸ್.ಆರ್. ಸಂಕನೂರ ಅವರ ಜೊತೆಗೂಡಿ ಗ್ರಾಮದ ಹಳೇ ಪಂಚಾಯಿತಿ ಆವರಣ, ಬಸವೇಶ್ವರ ಓಣಿ, ಸಂಗೊಳ್ಳಿರಾಯಣ್ಣ ವೃತ್ತ ಹಾಗೂ ಬಸ್ ನಿಲ್ದಾಣದ ಸುತ್ತಲಿನ ಮನೆಗಳಿಗೆ ತೆರಳಿ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದರು.
ಒಣ ಕಸ ಮತ್ತು ಹಸಿ ಕಸ ಎಂದು ಬೇರ್ಪಡಿಸಿ, ಗ್ರಾಪಂ ವತಿಯಿಂದ ನೀಡಲಾದ ಕಸದಬುಟ್ಟಿಗೆ ಪ್ರತ್ಯೇಕವಾಗಿ ಹಾಕಬೇಕು. ಸಂಗ್ರಹಗೊಂಡ ಕಸದ ವಾಹಿನಿ ಬಂದಾಗ ಸ್ವಚ್ಛತೆಗಾರರ ಮೂಲಕ ಕಸ ವಿಲೇವಾರಿಗೆ ಸಹಕರಿಸಬೇಕು. ಇದರಿಂದ ಮನೆ-ಗ್ರಾಮ ಕಸ ಮುಕ್ತವಾಗಿ ಸಾಂಕ್ರಾಮಿಕ ರೋಗಭಾದೆ ಭಾದಿಸುವುದಿಲ್ಲ ಎಂದು ಅರಿವು ಮೂಡಿಸಿದರು.
ಇನ್ನೂ ಕಿರಾಣಿ ಅಂಗಡಿ, ಹೋಟೆಲ್ ಗಳಿಗೆ ತೆರಳಿ ಮಾಲೀಕರಲಿ ಸ್ವಚ್ಛತೆಯ ಪಾಠ ಮಾಡಿದ ಇಒ ಚಂದ್ರಶೇಖರ ಕಂದಕೂರ, ಪ್ಲಾಸ್ಟಿಕ್ ಕವರ್ಗಳನ್ನು ಹೊರಗಡೆ ಬಿಸಾಡದೇ ಕಸದಬುಟ್ಟಿಯಲ್ಲಿ ಸಂಗ್ರಹಿಸಿ, ಅಂಗಡಿಗೆ ಬರುವ ಗ್ರಾಹಕರಲ್ಲಿ ಪ್ಲಾಸ್ಟಿಕ್ ಹಾಳೆ ತರದೆ ಪರಿಸರ ಸ್ನೇಹಿ ಕೈಚೀಲ ತಂದು ದಿನಸಿ ಖರೀದಿಸುವಂತೆ ತಿಳಿವಳಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.
ಮಾರನಬಸರಿ ಕಸದ ವಾಹಿನಿ ಚಾಲಕಿ ಗೀತಾ ಹಾದಿಮನಿ ಅವರೊಂದಿಗೆ ಇಒ ಚಂದ್ರಶೇಖರ ಕಂದಕೂರ ಸಮಾಲೋಚನೆ ನಡೆಸಿ, ನಿಮ್ಮ ಗ್ರಾಮಕ್ಕೆ ನೀವೇ ಸ್ವಚ್ಛತೆಯ ರಾಯಭಾರಿಗಳು, ಸ್ವಚ್ಛತೆ ಕುರಿತು ಗ್ರಾಮಸ್ಥರಿಗೆ ನೀವೇ ಮೊದಲ ಗುರುವಾಗಬೇಕು ಎಂದು ಪ್ರೋತ್ಸಾಹ ತುಂಬಿದರು.
ಉಪಾಧ್ಯಕ್ಷೆ ಮಂಜುಳಾ ಹಾದಿಮನಿ, ಸದಸ್ಯರಾದ ಶಿವಕುಮಾರ ದಿಂಡೂರು, ಅಲ್ಲಾಸಾಬ್ ಬೋತೇಖಾನ, ವೀರಪ್ಪ ನಿಡಗುಂದಿ, ದಿಲ್ಷಾದ್ ದೋಟಿಹಾಳ, ಫಾತಿಮಾ ಸವಡಿ, ಹನುಮಂತಪ್ಪ ತಳವಾರ, ಇತರರಿದ್ದರು.