

ಕಳಸ: ಕಳಸ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಗ್ರಾಮ ಸ್ಪಂದನಾ ಕಾರ್ಯಕ್ರಮಕ್ಕೆ ಗ್ರಾಮಸ್ಥರೇ ಬರದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಡಳಿತದಿಂದ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಆಲಿಸಿ ಪರಿಶೀಲಿಸಿ ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಅದರಂತೆ ಕಳಸ ಗ್ರಾಪಂನಲ್ಲೂ ಶನಿವಾರ ಸಭೆ ಆಯೋಜಿಸಲಾಗಿತ್ತು. ಎರಡು ದಿನಗಳ ಹಿಂದೆ ಗ್ರಾಪಂನಿಂದ ಪ್ರಚಾರ ಮಾಡಲಾಗಿತ್ತಾದರೂ ದೂರುಗಳನ್ನು ಹೇಳಲು ಕಳಸ ಗ್ರಾಮಸ್ಥರು ಗ್ರಾಪಂಗೆ ಬರಲಿಲ್ಲ. ಸಭೆಗೆ ಆಗಮಿಸಿದ್ದ ಕಲ್ಲುಬಾವಿ ಗ್ರಾಮಸ್ಥರು ಗ್ರಾಮದಲ್ಲಿ ಕೊಳಚೆ ನೀರು ಬರುತ್ತದೆ ಎಂದು ದೂರು ಹೇಳಿದರು. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಕವೀಶ್ ಭರವಸೆ ನೀಡಿದರು.
ಗ್ರಾಮ ಸ್ಪಂದನಾ ಕಾರ್ಯಕ್ರಮದಲ್ಲಿ ಮೂರು ದೂರುಗಳು ದಾಖಲಾದವು. ಉಳಿದಂತೆ ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳು ಒಂದೆರಡು ಸಮಸ್ಯೆಗಳನ್ನು ಹೇಳಿ ಸಭೆ ಮುಕ್ತಾಯಗೊಳಿಸಿದರು.
ಕಳಸ ತಹಸೀಲ್ದಾರ್ ಶಾರದಾ, ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಉಪಾಧ್ಯಕ್ಷ ರಂಗನಾಥ್, ಸದಸ್ಯರಾದ ಸುಜಯಾ ಸದಾನಂದ, ವೀರೇಂದ್ರ, ಅನ್ನಪೂರ್ಣ, ಭಾಸ್ಕರ್ ಇತರರಿದ್ದರು.