

ಮದ್ದೂರು: ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಲೆಕ್ಕಾಧಿಕಾರಿಯ ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಗ್ರಾಮ ಸಹಾಯಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗ್ರಾಮ ಸಹಾಯಕ ಅನಿಲ್ ಆತ್ಮಹತ್ಯೆಗೆ ಯತ್ನಿಸಿದ್ದು, ಗ್ರಾಮ ಲೆಕ್ಕಾಧಿಕಾರಿ ಮಧು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾರಸಿಂಗನಹಳ್ಳಿಯ ಮನೆಯಲ್ಲೇ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ಕೆಲಸದ ಸಮಯದಲ್ಲಿ ವಿನಾ ಕಾರಣ ಒತ್ತಡ ಹಾಕುವ ಗ್ರಾಮ ಲೆಕ್ಕಾಧಿಕಾರಿ ಇಲ್ಲಸಲ್ಲದ ಕೆಲಸವನ್ನು ಮಾಡುವಂತೆ ಸೂಚಿಸುತ್ತಾರೆ. ಮಂಗಳವಾರ ಪತ್ನಿಗೆ ನಾಯಿ ಕಚ್ಚಿದ್ದರಿಂದ ಆಕೆಗೆ ಚುಚ್ಚುಮದ್ದು ಹಾಕಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಅದಕ್ಕೂ ಮುನ್ನ ಗ್ರಾಮ ಲೆಕ್ಕಾಧಿಕಾರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಮೆಸೇಜ್ ಮಾಡಿದ್ದೆ. ಇದನ್ನ ನೆಪವಾಗಿಸಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಹೇಳನ ಮಾಡಿದ್ದರು. ಇದರಿಂದ ಮನನೊಂದು ಆತ್ಮಹತ್ಯೆಗೆ ಮುಂದಾಗಿದ್ದೇನೆ ಎಂದು ಗ್ರಾಮ ಸಹಾಯಕ ಅನಿಲ್ ತಿಳಿಸಿದ್ದಾರೆ.
ವಿಚಾರ ತಿಳಿದ ತಹಸೀಲ್ದಾರ್ ನರಸಿಂಹಮೂರ್ತಿ, ರಾಜಸ್ವ ನಿರೀಕ್ಷಕ ಗೋವರ್ಧನ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದು ಪ್ರಾಥಮಿಕ ಚಿಕಿತ್ಸೆ ನಂತರ ಮಂಡ್ಯ ಮಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಿದ್ದಾರೆ. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ತಾಲೂಕಿನ ಕೊಪ್ಪ ಹೋಬಳಿಯ ಮಾರಸಿಂಗನಹಳ್ಳಿ ಗ್ರಾಮದ ಆಡಳಿತ ಅಧಿಕಾರಿ ಎಂ.ಪಿ.ಮಧುಕುಮಾರ್ ಗ್ರಾಮ ಸಹಾಯಕ ಅನಿಲ್‌ಕುಮಾರ್‌ಗೆ ಮಾನಸಿಕ ಕಿರುಕುಳ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮದ್ದೂರು ತಾಲೂಕು ಕಂದಾಯ ಇಲಾಖೆ ಗ್ರಾಮ ಸಹಕಾರ ಸಂಘದ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಎಂ.ರಾಜಣ್ಣ ಮಾತನಾಡಿ, ಅನಿಲ್‌ಕುಮಾರ್ ಅವರಿಗೆ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಗ್ರಾಮ ಆಡಳಿತ ಅಧಿಕಾರಿ ಎಂ.ಪಿ.ಮಧುಕುಮಾರ್ ಮಾಡಿದ್ದು, ಇವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಸಂಘದ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಸಿ.ಎಂ.ಮಹಲಿಂಗಯ್ಯ, ಕಾರ್ಯದರ್ಶಿ ಬಿ.ಸುರೇಶ್, ಉಪಾಧ್ಯಕ್ಷ ಚಿಕ್ಕಹನುಮಯ್ಯ, ನಿರ್ದೇಶಕರಾದ ನಿಂಗಯ್ಯ, ಅಪ್ಪಾಜಿ, ಗ್ರಾಮ ಸಹಾಯಕರಾದ ರಾಜಕುಮಾರ್, ಗೋಪಾಲ್, ಲಿಂಗಯ್ಯ, ಗಿರಿಧರ್, ವೆಂಕಟೇಶ್, ಗುರುಸ್ವಾಮಿ, ಸುರೇಶ್, ರಮೇಶ್ ಇದ್ದರು.
ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಮಾರಸಿಂಗನಹಳ್ಳಿ ಗ್ರಾಮದ ಆಡಳಿತಾಧಿಕಾರಿ ಎಂ.ಪಿ.ಮಧುಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮದ್ದೂರು ತಾಲೂಕು ಕಂದಾಯ ಇಲಾಖೆ ಗ್ರಾಮ ಸಹಕಾರ ಸಂಘದ ವತಿಯಿಂದ ತಾಲೂಕು ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಲಾಯಿತು.