ಗ್ರಾಮ ಸಭೆಯಲ್ಲಿ ಸಮಸ್ಯೆಗಳದ್ದೇ ಸದ್ದು

11.npk-3
ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಪಂಚಾಯತಿ ಅಧ್ಯಕ್ಷೆ ಪಾರ್ವತಿ ಮಾತನಾಡಿದರು.
Published on

ನಾಪೋಕ್ಲು: ಮಡಿಕೇರಿ ತಾಲೂಕಿನಲ್ಲಿ ಎರಡನೇ ದೊಡ್ಡ ಪಟ್ಟಣವಾದ ನಾಪೋಕ್ಲುವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ಸೌಲಭ್ಯವಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಬರುವ ರೋಗಿಗಳು ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಅಂತಸ್ತಿನ ಕಟ್ಟಡವಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯಗಳಿಲ್ಲ. 32 ಸಿಬ್ಬಂದಿ ಇದ್ದರೂ ವೈದ್ಯರ ಕೊರತೆಯಿದೆ. ಹೋಬಳಿಯ ಸುಮಾರು 27 ಗ್ರಾಮಗಳ ಜನರು ಚಿಕಿತ್ಸೆಗಾಗಿ ಕೇಂದ್ರಕ್ಕೆ ಬರುತ್ತಾರೆ. ಹಾಗಾಗಿ, ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಕಸ ವಿಲೇವಾರಿಯ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಜಾಗ ಗುರುತಿಸಬೇಕು. ಮಾದಕ ವಸ್ತುಗಳ ಅಕ್ರಮ ಮಾರಾಟವು ಅಲ್ಲಲ್ಲಿ ಕಂಡುಬರುತ್ತಿದ್ದು, ಕ್ರಮ ವಹಿಸಬೇಕು. ಅಲ್ಲದೇ, ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದಾಗ ಸಮಸ್ಯೆ ಕಾಡುತ್ತದೆ ಎಂದು ಸಭೆಯಲ್ಲಿದ್ದ ಕೆಲವು ಸಮಸ್ಯೆಗಳನ್ನು ತೆರೆದಿಟ್ಟರು.

ಸಮೀಪದ ಕಾವೇರಿ ನದಿ ದಡದಲ್ಲಿರುವ ಚೆರಿಯಪರಂಬುವಿನಲ್ಲಿ ಹಲವರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಇಲ್ಲಿನ ಸರ್ಕಾರಿ ಕಾಲೇಜಿನ ಜಾಗ ಒತ್ತುವರಿಯಾಗಿದ್ದು ಕ್ರಮ ಕೈಗೊಂಡಿಲ್ಲ. ಪಟ್ಟಣದಲ್ಲಿರುವ ವಾಣಿಜ್ಯ ಕಟ್ಟಡ ಹಾಗೂ ಮನೆಗಳಿಗೆ ಗ್ರಾಪಂನಿಂದ ವಿಧಿಸುತ್ತಿರುವ ತೆರಿಗೆ ಅಸಮರ್ಪಕವಾಗಿದೆ. ಸೂಕ್ತ ತೆರಿಗೆ ವಿಧಿಸಿದರೆ ಪಂಚಾಯಿತಿಗೂ ಆದಾಯ ಲಭಿಸಲಿದೆ ಎಂದು ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆ ಅಧಿಕಾರಿಗಳು, ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಚ್.ಎಸ್.ಪಾರ್ವತಿ, ಪಿಡಿಒ ಚೋದಕ್ಕಿ, ಸದಸ್ಯ ಕುಲೇಟಿರ ಅರುಣ್ ಬೇಬ, ಇಸ್ಮಾಯಿಲ್, ಪ್ರತೀಪ, ಖುರೇಶಿ, ಸುಧಿ ತಿಮ್ಮಯ್ಯ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸುವುದರ ಜತೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ನೋಡಲ್ ಅಧಿಕಾರಿ ಹೇಮಂತ್‌ಕುಮಾರ್, ಗ್ರಾಮಸ್ಥರಾದ ಕಾಂಡಂಡ ಜೋಯಪ್ಪ, ಕೊಂಡಿರ ನಾಣಯ್ಯ, ಹ್ಯಾರಿಸ್ ಕೆ.ಎ. ಕುಲ್ಲೇಟಿರ ಅಜಿತ್ ನಾಣಯ್ಯ, ಕಂಗಾಂಡ ಜಾಲಿ ಪೂವಪ್ಪ, ಕಾಂಡಂಡ ವಿಶುಪುವಯ್ಯ, ಅರೆಯಡ ನಾಣಯ್ಯ ,ಬಾಲೆಯಡ ವೇದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net