

ಮೈಸೂರು: ಗ್ರಾಮ ಸಭೆಗಳಿಂದ ರಚನಾತ್ಮಕ ಚರ್ಚೆ ನಡೆಯುತ್ತಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದರು.
ಗ್ರಾಮ ಸಭೆಗಳನ್ನು ಕರೆದು ಚರ್ಚೆ ಮಾಡಿ ಫಲಾನುಭವಿಗಳಿಗೆ ಸೌಲಭ್ಯ ಮಂಜೂರಾತಿ ಮಾಡುವುದು ಮುಖ್ಯ. ಆದರೆ, ಗ್ರಾಮ ಸಭೆಯಲ್ಲಿ ನಮ್ಮ ಜಾತಿ, ನಮ್ಮ ಪಕ್ಷದವನು ಎನ್ನುವ ರೀತಿಯಲ್ಲಿ ಜಂಗಿಕುಸ್ತಿ ನಡೆಯುತ್ತಿವೆಯೇ ಹೊರತು ರಚನಾತ್ಮಕ ಚರ್ಚೆ ನಡೆಯುತ್ತಿಲ್ಲ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಹಣಕಾಸಿನ ವಿವರ, ಆಡಳಿತ ಮತ್ತು ಪಾರದರ್ಶಕ ನಿರ್ವಹಣೆ ಮುಖ್ಯ. ಮಹಿಯರಿಗೆ ಶೇ.50ರಷ್ಟು ಮೀಸಲಾತಿ ಕೊಡಲಾಗಿದೆ. ರಾಜ್ಯದಲ್ಲಿರುವ 6,200 ಗ್ರಾಪಂಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಕೆಲವು ಪಂಚಾಯಿತಿಗಳಲ್ಲಿ ಎಸ್‌ಸಿ-ಎಸ್‌ಟಿ ಸದಸ್ಯರೇ ಹೆಚ್ಚಾಗಿದ್ದಾರೆ ಎಂದರು.
ಅಬ್ದುಲ್ ನಜೀರ್‌ಸಾಬ್ ಇದ್ದಾಗ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದರು. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಮೂರು ಹಂತದ ಆಡಳಿತ ಮತ್ತು ಪೂರ್ಣ ಪ್ರಮಾಣದಲ್ಲಿ ಆಡಳಿತ ನಡೆಸುವಂತಹ ವ್ಯವಸ್ಥೆಯನ್ನು ಜಾರಿಗೆ ತಂದರು. ಇದರಿಂದಾಗಿ ಸಾಕಷ್ಟು ಬದಲಾವಣೆಯಾಗಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದೊಡ್ಡ ಇಲಾಖೆ. ಗ್ರಾಮ ಸ್ವರಾಜ್ ಆಶಯದಡಿ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಉತ್ಪಾದನೆ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಸ್ವಾವಲಂಬನೆ ಬದುಕು ಸಾಗಿಸುವುದು ಮುಖ್ಯ. ಕೃಷಿ ಮತ್ತು ಕೃಷಿ ಆಧಾರಿತ ಉತ್ಪಾದನೆ ಮಾಡಿದರೆ ಅನುಕೂಲವಾಗಲಿದೆ. ಎರಡು ಸಾವಿರ ವರ್ಷಗಳಿಂದಲೂ ಗ್ರಾಮ ಸ್ವರಾಜ್ ಕಲ್ಪನೆಯಿದೆ. ಬುದ್ಧ ಬೌದ್ಧ ಬಿಕ್ಕುಗಳ ಮೂಲಕ ಎಲ್ಲ ಸಮುದಾಯಗಳ ನುರಿತ ಜೀವಿಗಳನ್ನು ಒಂದೆಡೆ ಸೇರಿಸಿ ಚಿಂತನೆ ಮಾಡುತ್ತಿದ್ದರು. ಅದೇ ರೀತಿ ಅನುಭವ ಮಂಟಪ ನಿರ್ಮಿಸಿದ್ದ ಬಸವಣ್ಣ ಎಲ್ಲರನ್ನು ಒಂದುಗೂಡಿಸಿ ಯೋಚಿಸುತ್ತಿದ್ದರು ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು, ನೌಕರರಿಗೆ ಬಡ್ತಿ ಮೀಸಲು ಕೊಡಿಸಲಾಗುವುದು. ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸಿ ಸಕಾರಾತ್ಮಕವಾಗಿ ಪರಿಹರಿಸಲಾಗುವುದು ಎಂದರು.
ಜಾತಿ ಸಮೀಕ್ಷೆ ಬಳಿಕ ಈಗಿರುವ ಶೇ.50ರಷ್ಟು ಮೀಸಲಾತಿ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಜನಸಂಖ್ಯೆಗೆ ಅನುಗುಣವಾಗಿ ಸಮುದಾಯಕ್ಕೆ ಬಲ ತುಂಬುವ ಕೆಲಸ ಆಗಬೇಕು. ಈ ಕಾರಣಕ್ಕಾಗಿಯೇ ಜಾತಿ ಜನಗಣತಿ ಕೈಗೊಂಡಿದ್ದು, ಪ್ರಸ್ತುತ ದಿನಗಳಲ್ಲಿ ನಾವೇ ಮೀಸಲಾತಿಗಾಗಿ ಕಚ್ಚಾಡುತ್ತಿದ್ದೇವೆ ಎಂದರು.
ಜಾತಿ ವ್ಯವಸ್ಥೆ ಈಗಲೂ ಇದೆ. ಮೇಲು-ಕೀಳು ಎಂಬ ಭಾವನೆಯೂ ಹೋಗಿಲ್ಲ. ಶೋಷಿತರು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಿದೆ. ಶೋಷಣೆ ಇರುವುದು ಸಮಾಜದಲ್ಲಿ. ಹೀಗಾಗಿ, ಸಮಾಜದಲ್ಲಿ ಶೋಷಣೆ ನಿಲ್ಲಬೇಕಿದೆ ಎಂದು ಹೇಳಿದರು.
ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಬಡ್ತಿ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ. ಮೇಲ್ವರ್ಗದ ಜನರು ಬಡ್ತಿ ಮೀಸಲಾತಿಗೆ ವಿರೋಧ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರು ಇದಕ್ಕೆ ಜಗ್ಗದೆ ಬಡ್ತಿ ಮೀಸಲಾತಿ ಕೊಟ್ಟರು ಎಂದು ಹೇಳಿದರು.