ಗ್ರಾಮ ವಾಸ್ತವ್ಯದಿಂದ ತಪ್ಪಿದೆ ಅಲೆದಾಟ:ಜಿಲ್ಲಾಡಳಿತದ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಡಿಸಿ ಆರ್.ಲತಾ ಹೇಳಿಕೆ

27CBP4c(DC)
Published on

ಶಿಡ್ಲಘಟ್ಟ: ಊರಿನಲ್ಲಿ ಜನರ ದೊಡ್ಡ ದಂಡು, ಮೆರವಣಿಗೆ ಮತ್ತು ವಿವಿಧ ಕಾರ್ಯಕ್ರಮಗಳಿಂದ ಹಬ್ಬದ ಸಂಭ್ರಮ ವಾತಾವರಣ, ಅಧಿಕಾರಿಗಳಿಂದ ಅಹವಾಲು ಸ್ವೀಕಾರ, ಜನರಿಂದ ಸಮಸ್ಯೆಗಳ ಮಹಾಪೂರ, ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ, ಇದು ತಾಲೂಕಿನ ಗಂಜಿಗುಂಟೆಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಮತ್ತು ತಾಲೂಕು ಆಡಳಿತದ ಹಮ್ಮಿಕೊಂಡಿದ್ದ ಜಿಲ್ಲಾಡಳಿತ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.

ಬೆಳಗ್ಗೆ ಜಿಲ್ಲಾಧಿಕಾರಿ ಆರ್.ಲತಾ ಅವರೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮದ ಜನರೊಂದಿಗೆ ಸೇರಿಕೊಂಡು ದಿನಪೂರ್ತಿ ಸಮಯ ಕಳೆದರು.

ಅನುಕೂಲಕರ ಗ್ರಾಮ ವಾಸ್ತವ್ಯ: ಜನರು ಸರ್ಕಾರಿ ಕಚೇರಿಗೆ ಅನವಶ್ಯಕವಾಗಿ ಅಲೆದಾಡುವುದನ್ನು ತಪ್ಪಿಸುವ ಹಾಗೂ ಆಡಳಿತ ಯಂತ್ರಾಂಗವೇ ಜನರ ಮನೆ ಬಾಗಿಲಿಗೆ ಹೋಗಿ ಸೇವೆ ಒದಗಿಸುವ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ. ಗ್ರಾಮೀಣ ಭಾಗದ ಜನರಿಗೆ ಈ ಕಾರ್ಯಕ್ರಮ ತುಂಬಾ ಅನುಕೂಲಕರ. ಜಿಲ್ಲಾಡಳಿತ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಈಗಾಗಲೇ ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯಲ್ಲಿ ಎರಡನೇ ಬಾರಿಗೆ ವಾಸ್ತವ್ಯ ಹೂಡಲಾಗುತ್ತಿದೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ತಲಾ 1 ಬಾರಿ ಕಾರ್ಯಕ್ರಮ ನಡೆದಿದೆ ಎಂದು ಡಿಸಿ ತಿಳಿಸಿದರು.

ತಹಸೀಲ್ದಾರ್ ಬಿ.ಎಸ್.ರಾಜೀವ್, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಇಂದಿರಾ ಕಬಾಡಿಯಾ, ಎಂವಿಜೆ ಆಸ್ಪತ್ರೆಯ ಡಾ.ಪ್ರಮೋದ್, ಮಾಜಿ ಶಾಸಕ ಎಂ.ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ತಾಪಂ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಮೇಶ್ ಇತರರಿದ್ದರು.

ಅಧಿಕಾರಿಗಳ ಭರವಸೆ:ಗ್ರಾಮ ವಾಸ್ತವ್ಯ ಕಾರ್ಯಕ್ರಮದಡಿಯಲ್ಲಿ ಅಧಿಕಾರಿಗಳು ಗ್ರಾಪಂ ವ್ಯಾಪ್ತಿಯ ಮನೆ ಮನೆಗೂ ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿದರು. 124 ಮಂದಿಗೆ ಪಿಂಚಣಿ, ಆರೋಗ್ಯ ಇಲಾಖೆಯಿಂದ ಹೆಲ್ತ್ ಕಾರ್ಡ್ ವಿತರಿಸಲಾಯಿತು. ಗ್ರಾಮದಲ್ಲಿ ಮತ್ತೊಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ಸ್ಥಳ ಗುರುತಿಸಿ, ಆದಷ್ಟು ಬೇಗ ಮಂಜೂರು ಮಾಡುವುದಾಗಿ ಡಿಸಿ ಭರವಸೆ ನೀಡಿದರು.

ಗ್ರಾಮದಲ್ಲಿ ಹಬ್ಬದ ವಾತಾವರಣ: ಜನರ ಅಹವಾಲು ಆಲಿಸಲು ಊರಿಗೆ ಬಂದ ಜಿಲ್ಲಾಧಿಕಾರಿ ಆರ್.ಲತಾ ಅವರನ್ನು ಗ್ರಾಮಸ್ಥರು ಆರತಿ ಬೆಳಗಿ ಸ್ವಾಗತಿಸಿದರು. ತಮಟೆವಾದನ ಕಲಾವಿದರು, ಕಳಸ ಹೊತ್ತ ಹೆಣ್ಣುಮಕ್ಕಳೊಂದಿಗೆ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಳ್ಳಿಯು ತಳಿರು ತೋರಣದಿಂದ ಸಿಂಗಾರಗೊಂಡಿತ್ತು. ಇಲ್ಲಿನ ನರಸಿಂಹಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಸಸಿಗಳನ್ನು ವಿತರಿಸಿದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ಒತ್ತುವರಿ ತೆರವಾದ ಪ್ರದೇಶದಲ್ಲಿ ಅರಣ್ಯೀಕರಣ: ಗ್ರಾಮದ ಕಲ್ಯಾಣಿ ಸಮೀಪದಲ್ಲಿರುವ 3 ಎಕರೆ ಜಮೀನನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಆರ್.ಲತಾ, ಕಳೆದ 15 ದಿನಗಳ ಹಿಂದೆ ಸರ್ಕಾರಿ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದು, ಇಲ್ಲಿ ಜಿಲ್ಲಾಡಳಿತವು ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ಅರಣ್ಯೀಕರಣಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದು ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಹಳೇ ಕಲ್ಯಾಣಿಯ ಜೀರ್ಣೋದ್ಧಾರ ನಿಟ್ಟಿನಲ್ಲಿ ಚಿಂತಿಸಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಡಿಸಿ ಚರ್ಚಿಸಿದರು.

ಬೆಂಬಲ ಬೆಲೆಗೆ ಆಗ್ರಹ: ಬೇಡಿಕೆ ಮತ್ತು ಬೆಲೆ ಕುಸಿತದ ಬೆಂಗಳೂರು ರೋಸ್ ಈರುಳ್ಳಿಗೆ ನಿಯಮಾನುಸಾರ ಬೆಂಬಲ ಬೆಲೆ ಘೋಷಣೆ, ದಾಸ್ತಾನಿಗೆ ಶೈತ್ಯಾಗಾರವನ್ನು ನಿರ್ಮಿಸುವಿಕೆ ಸೇರಿ ವಿವಿಧ ಬೇಡಿಕೆಗಳ ಬಗ್ಗೆ ರೈತರು, ಜಿಲ್ಲಾಡಳಿತದ ಗಮನ ಸೆಳೆದರು.

ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ, ಸಾದಲಿ ಸೇರಿ ಇತರ ಭಾಗದ ಬಹುತೇಕ ರೈತರು ಹೆಚ್ಚಾಗಿ ಬೆಂಗಳೂರು ರೋಸ್ ಈರುಳ್ಳಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ 10 ಸಾವಿರ ಟನ್‌ನಷ್ಟು ಈರುಳ್ಳಿ ಬೆಳೆದಿದ್ದು ಬೆಲೆ ಕುಸಿತದಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಇತರ ಬೆಳೆಗಳ ಮಾದರಿಯಲ್ಲಿ ಈರುಳ್ಳಿಗೂ ಬೆಂಬಲ ಬೆಲೆ ಘೋಷಿಸಬೇಕು. ಹೊರದೇಶಗಳಿಗೆ ಹೆಚ್ಚಾಗಿ ರಫ್ತಾಗುವ ಈರುಳ್ಳಿಯ ಗುಣಮಟ್ಟವನ್ನು ಕಾಪಾಡಲು ಶೈತ್ಯಾಗಾರವನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಸಲ್ಲಿಸಿದರು.

ಪ್ರತಿ ಮನೆ ಮನೆಗೂ ಭೇಟಿ ನೀಡಿ: ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಗ್ರಾಪಂ ವ್ಯಾಪ್ತಿಯ ಪ್ರತಿ ಮನೆ ಮನೆಗೂ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಿಗಬೇಕಾದ ಅಗತ್ಯ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಅಧಿಕಾರ ವರ್ಗದಿಂದ ಪ್ರಾಮಾಣಿಕವಾಗಿ ಆಗಬೇಕು. ಬೆಲೆಯಿದ್ದರೆ ಬೆಳೆಯಿಲ್ಲ, ಬೆಳೆಯಿದ್ದರೆ ಬೆಲೆಯಿಲ್ಲ, ಎರಡೂ ಇದ್ದರೆ ಮಳೆಯಿಲ್ಲ ಹಾಗಾಗಿ ಈ ಭಾಗದ ಬಹುತೇಕ ರೈತರು ಒಂದಲ್ಲ ಒಂದು ರೀತಿಯಲ್ಲಿ ಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುವಂತಾಗಬೇಕು. ಕೇಂದ್ರ ಸರ್ಕಾರದಿಂದ ರೈತರಿಗೆ ಪ್ರತಿ ವರ್ಷ ಆರು ಸಾವಿರ, ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂ.ನೀಡಲಾಗಿತ್ತಿದೆ. ರೈತರಿಗೆ ಬಿತ್ತನೆ ಬೀಜ ಸೇರಿ ರಸಗೊಬ್ಬರ ವಿತರಣೆ ಸಕಾಲದಲ್ಲಿ ಸರ್ಕಾರದಿಂದ ನೀಡಲಾಗುತ್ತಿದೆ. ಸರ್ಕಾರಿ ಗೋಮಾಳ, ಸ್ಮಶಾನ, ಕೆರೆ, ಕುಂಟೆ ಇವೆಲ್ಲವೂ ಸಾರ್ವಜನಿಕ ಆಸ್ತಿಗಳಾಗಿದ್ದು ಯಾರೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಕೂಡಲೆ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net