

ಬಾಗಲಕೋಟೆ: ಆಡಳಿತ ಯಂತ್ರಕ್ಕೆ ವೇಗ, ಪಾರದರ್ಶಕತೆ ತಂದು ಬಡವರಿಗೆ ಸರ್ಕಾರಿ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಕಂದಾಯ ಸಚಿವರಾದ ಬಳಿಕ ಆರ್.ಅಶೋಕ ಅವರು ಮಾಡುತ್ತ ಬಂದಿರುವ ಗ್ರಾಮ ವಾಸ್ತವ್ಯವನ್ನು ಶನಿವಾರ ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಕೈಗೊಂಡರು.
ಬಾಗಲಕೋಟೆ ತಾಲೂಕಿನ ಬೀಳಗಿ ವಿಧಾನಸಭೆ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ ಭಾಗವಹಿಸಿ ಗ್ರಾಮ ವಾಸ್ತವ್ಯದ ಅನೇಕ ನೆನಪಿಗಳನ್ನು ಮಾಧ್ಯಮಗಳ ಎದುರು ಹರವಿದರು.
ಕಲಾದಗಿ ಗ್ರಾಮದ್ದು 18ನೇ ಗ್ರಾಮದ ವಾಸ್ತವ್ಯವಾಗಿದೆ. ದೊಡ್ಡಬಳ್ಳಾಪುರದಿಂದ ಆರಂಭವಾದ ಈ ಕಾರ್ಯಕ್ರಮ ಇವತ್ತು ಕಲಾದಗಿ ವರೆಗೂ ಬಂದಿದೆ. ಅತಿ ಹೆಚ್ಚು ಉತ್ತರ ಕರ್ನಾಟದಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾಗಿ ಹೇಳಿದರು. ಇಂದಿನ ಗ್ರಾಮ ವಾಸ್ತವ್ಯ ಬಹುತೇಕ ಈ ಸರ್ಕಾರದ ಅವಧಿಯ ಕೊನೆಯದಾಗಬಹುದು. ಆದರೆ, ಮುಂದೆ ಮತ್ತೆ ನಮ್ಮದೇ ಸರ್ಕಾರ ಬರಲಿದ್ದು, ಆಗ ಮುಂದುವರೆಸುವುದಾಗಿ ಸಚಿವರು ವಿಶ್ವಾಸದಿಂದ ಹೇಳಿದರು.
ಇನ್ನು ಹಿಂದಿನ ಗ್ರಾಮ ವಾಸ್ತವ್ಯಗಳ ಅನುಭವ ಹಾಗೂ ಅದರಿಂದಾಗಿಯೇ ಸಚಿವರಾಗಿ ಇಲಾಖೆಯಲ್ಲಿ ಮಹತ್ತರವಾಗಿ ತೀರ್ಮಾನಗಳನ್ನು ಕೈಗೊಳ್ಳಲು ಕಾರಣವಾಯಿತು ಎನ್ನುವುದನ್ನು ಒತ್ತಿ ಹೇಳಿದರು.
ಗ್ರಾಮ ವಾಸ್ತವ್ಯ ಎನ್ನುವುದು ಒಂದು ಪಾಠಶಾಲೆ ಇದ್ದಂತೆ. ಇಲ್ಲಿ ಕಲಿಯುವುದು ಬಹಳಷ್ಟು ಇರುತ್ತದೆ. ಬೆಂಗಳೂರ, ವಿಧಾನಸೌಧ, ಡಿಸಿ ಕಚೇರಿಯಲ್ಲಿ ಕುಳಿತರೆ ಏನು ಕಲಿಯಲು ಆಗಲ್ಲ. ಬರೀ ಪುಸ್ತಕ ನೋಡಬೇಕು ಅಷ್ಟೆ. ವಾಸ್ತವಾಗಿ ಜನರ ಭವಣೆ, ಸಂಕಷ್ಟಗಳನ್ನು ತಿಳಿದುಕೊಳ್ಳಲು ಹಳ್ಳಿಗೆ ಬರಬೇಕು. ಅದು ಬರೀ ಅರ್ಧಗಂಟೆ, ಒಂದು ಗಂಟೆಯಲ್ಲಿ ಆಗಲ್ಲ. 24 ಗಂಟೆ ಕಳೆಯಬೇಕು. ಆಗ ಮಾತ್ರ ವಾಸ್ತವ ಸ್ಥಿತಿ ತಿಳಿಯಲು ಸಾಧ್ಯ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹೇಳುದಂತೆ ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರ ಬದಲಾವಣೆ ತಂದಿದ್ದೇವೆ. ಮನೆ ಬಾಗಿಲಿಗೆ ಪೆನ್ಶನ್, ಯಾರು ಬೇಕಾದರೂ ರೈತರಾಗುವ 79 ಎ, ಬಿ ಮಾಡುವಂತದ್ದು. ಇನಾಮತಿ ಜಮೀನು ಬಡವರಿಗೆ ಸಿಗಬೇಕೆಂದು ಕಾಯ್ದೆ ಬದಲಾವಣೆ ಮಾಡಿದ್ದು. ಇಂತ ಹಲವು ಜನಪರ ಕಾರ್ಯ ಕೈಗೊಳ್ಳಲು ಗ್ರಾಮ ವಾಸ್ತವ್ಯವೇ ನನಗೆ ಪ್ರೇರಣೆ ಆಯಿತು ಎಂದು ಸಚಿವ ಅಶೋಕ ಸ್ಪಷ್ಟಪಡಿಸಿದರು.
21ನೇ ಶತಮಾನದಲ್ಲೂ ಗಡ್ಡೆ ಗೆಣಸು ತಿಂದು ಜೀವನ : ನಾನು ಕೈಗೊಂಡ ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ತೃಪ್ತಿ ತಂದುಕೊಟ್ಟಿವೆ. ಕಾಡಂಚಿನಲ್ಲೂ ಹೋಗಿದ್ದೇನೆ. ಕಾಡಿನ ಜನರ ಮಧ್ಯ ವಾಸ ಮಾಡುವ ಜನರನ್ನು ನೋಡಿದಾಗ ಕಣ್ಣೀರು ಬರುತ್ತದೆ. 21ನೇ ಶತಮಾನ ದಾಟಿದ್ದೇವೆ. ಆದರೂ ಅವರು ಇವತ್ತಿಗೂ ಗಡ್ಡೆ ಗೆಣಸು ತಿಂದು ಬದುಕುತ್ತಿದ್ದಾರೆ. ಈ ವರೆಗೂ ಅವರ ಕಡೆಗೆ ಯಾರೂ ಗಮನ ಹರಿಸಿರಲಿಲ್ಲ. ಹೀಗಾಗಿ ಅವರಿಗೆ ಸಿಗಬೇಕಾದ ಎಲ್ಲ ಸರ್ಕಾರಿ ಸೌಲಭ್ಯಗಳು ಸಿಗಬೇಕೆಂದು ಆದೇಶ ಮಾಡಿದ್ದೇನೆ. ಇದೆಲ್ಲ ಮಾಡಲು ಸಾಧ್ಯವಾಗಿದೆ ಎಂದರೆ ಗ್ರಾಮ ವಾಸ್ತವ್ಯ ಕಾರಣವಾಯಿತು.
ಅಮಿತ್ ಶಾ ಕರೆಸಿ ಗೊಲ್ಲರ ಹಟ್ಟಿ, ಕುರುಬರ ಹಟ್ಟಿ ಕಾರ್ಯಕ್ರಮ : ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಲಂಬಾಣಿ ತಾಂಡಾಗಳಿಗೆ ಹೆಸರು ಇರಲಿಲ್ಲ. ಜೀವನವೇ ಇರಲಿಲ್ಲ. ಹೀಗಾಗಿ ಅವರ ತಾಂಡಾಗಳಿಗೆ ಹೆಸರು ಕೊಡುತ್ತಿದ್ದೇವೆ. ವಾಸ ಮಾಡುವ ಜಾಗವನ್ನು ಎಲ್ಲ ಜನರಿಗೂ ನೊಂದಣಿ ಮಾಡಿಕೊಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಕರೆದು 50 ಸಾವಿರ ಕುಟುಂಬಗಳಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ. ಮುಂದೆ ಡಾವಣಗೇರಿಯಲ್ಲಿ ಗೊಲ್ಲರ ಹಟ್ಟಿ, ಕುರುಬರ ಹಟ್ಟಿಯಲ್ಲಿ ಕಾರ್ಯಕ್ರಮ ಮಾಡಿ ಅಲ್ಲಿಯೂ 50 ಸಾವಿರ ಜನರಿಗೆ ಈ ರೀತಿ ಅನುಕೂಲ ಮಾಡಿಕೊಡಲಿದ್ದೇವೆ. ಇದಕ್ಕಾಗಿ ಅಮಿತ್ ಶಾ ಅವರನ್ನು ಕರೆಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಕಲಾದಗಿಯಲ್ಲಿ ಕಂದಾಯ ಸಚಿವರಿಗೆ ಭವ್ಯ ಸ್ವಾಗತ:
ಇನ್ನು ಕಲಾದಗಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯಕ್ಕೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಜನರು ಭವ್ಯ ಸ್ವಾಗತಕೋರಿದರು. ಗ್ರಾಮ ಪ್ರವೇಶ ದ್ವಾರದ ಬಳಿ ಇರುವ ಸಾಯಿ ಮಂದಿರದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಅಪಾರ ಸಂಖ್ಯೆಯ ಮಹಿಳೆಯರು ಕುಂಭ ಹೊತ್ತು ಸ್ವಾಗತಿಸಿದರು. ಟ್ರ್ಯಾಕ್ಟರಿ ಹತ್ತಿದ ಸಚಿವ ಆರ್.ಅಶೋಕ ಅವರಿಗೆ ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಸಾಥ್ ನೀಡಿದರು. ಟ್ರ್ಯಾಕ್ಟರ್ ಮುಂದೆ ಅನೇಕ ರೈತರು ಎತ್ತಿನ ಬಂಡಿಗಳ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಚಾಂಜ್, ಡೊಳ್ಳು ಕುಣಿತ, ಕರಡಿ ಮಜಲಿನ ವೈಭವ ಕಂಡು ಬಂದಿತು. ಕಲಾದಗಿ ಗ್ರಾಮದ ಗುರುಲಿಂಗೇಶ್ವರ ಪ್ರೌಢಶಾಲೆ ಮೈದಾನದಲ್ಲಿ ನಡೆದ ಮುಖ್ಯ ವೇದಿಕೆ ವರೆಗೂ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
28332 ಫಲನುಭವಿಗಳು: ಕಲಾದಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಳುಗಡೆ ವ್ಯಾಪ್ತಿಗೆ ಬರುವ 1970 ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ, ಅಂಗವಿಕಲರಿಗೆ ಕೃತಕ ಕಾಲುಗಳ ಜೋಡಣೆ ಸೇರಿದಂತೆ ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಇಲಾಖೆ, ಕೃಷಿ, ತೋಟಗಾರಿಕೆ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಯುಷ್, ಕಾರ್ಮಿಕ, ಅರಣ್ಯ, ರೇಷ್ಮೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮೀನುಗಾರಿಕೆ, ಸಮಾಜ ಕಲ್ಯಾಣ, ಕೌಶಲ್ಯಾಭಿವೃದ್ದಿ, ಕೈಮಗ್ಗ ಮತ್ತು ಜವಳಿ, ದೇವರಾಜು ಅರಸು ನಿಗಮ, ಜಿಲ್ಲಾ ನಗರಾಭಿವೃದ್ದಿ ಕೋಶ ಸೇರಿ ಒಟ್ಟು 28332 ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ಸಾಂಕೇತಿಕವಾಗಿ 122 ಜನರಿಗೆ ಸಚಿವ ಆರ್.ಅಶೋಕ ವಿತರಿಸಿದರು.
ಕೃತಕ ಕಾಲು ಜೋಡಿಸಿದ ಸಚಿವ ಅಶೋಕ : ಕಲಾದಗಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯದ ಮುಖ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸುವ ವೇಳೆ ಅಂಗವಿಕಲರೊಬ್ಬರಿಗೆ ಸಚಿವ ಆರ್.ಅಶೋಕ ಅವರೇ ಖುದ್ದಾಗಿ ನೆಲದ ಮೇಲೆ ಕುಳಿತು ಕೃತಕ ಕಾಲು ಜೋಡಣೆ ಮಾಡಿದ್ದು ಗಮನ ಸೆಳೆಯಿತು.
ಕಲಾದಗಿ ಅಭಿವೃದ್ದಿಗೆ ಒಂದು ಕೋಟಿ ಅನುದಾನ : ಗ್ರಾಮ ವಾಸ್ತವ್ಯ ಮಾಡಿದ ಕಲಾದಗಿ ಗ್ರಾಮದ ಅಭಿವೃದ್ದಿಗಾಗಿ ಕಂದಾಯ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ನೀಡುವುದಾಗಿ ಸಚಿವ ಅಶೋಕ ಹೇಳಿದರು. ಗ್ರಾಮದಲ್ಲಿ ಅಗತ್ಯ ಇರುವ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬಳಿಕೆ ಮಾಡಿಕೊಳ್ಳಬಹುದು ಎಂದರು.
ಕ್ಷೇತ್ರದ ಅಭಿವೃದ್ದಿ ಕಾಮಗಾರಿಗಳನ್ನು ವಿವರಿಸಿದ ಸಚಿವ ನಿರಾಣಿ :
ಇನ್ನು ಗ್ರಾಮ ವಾಸ್ತವ್ಯದಲ್ಲಿ ಕ್ಷೇತ್ರದ ಶಾಸಕ, ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಬೀಳಗಿ ಮತಕ್ಷೇತ್ರದಲ್ಲಿ 1.25 ಲಕ್ಷ ಎಕರೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಲಾದಗಿ ಗ್ರಾಮದ ಪುನರ್ ವಸತಿಗಾಗಿ 400 ಎಕರೆ ಗುರುತಿಸಿದ್ದು, 250 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಬೀಳಗಿ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಾಗಿ ವೈಯಕ್ತಿಕವಾಗಿ 3 ಕೋಟಿ ರೂ. ಕೊಟ್ಟಿರುವುದನ್ನು ಹೇಳಿದರು. 320 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಚಿಕ್ಕಸಂಗಮದಲ್ಲಿ ಪಕ್ಷದಾಮಕ್ಕೆ 25 ಕೋಟಿ ರೂ., 40 ಕೋಟಿ ರೂ. ವೆಚ್ಚದಲ್ಲಿ ಕೆಆರ್ ಎಸ್ ಮಾದರಿಯ ಉದ್ಯಾನವನ ನಿರ್ಮಾಣ ಹಾಗೂ ಹೆರಕಲ್ ನಿಂದ ಆಲಮಟ್ಟಿ ಹಿನ್ನೀರಿನಲ್ಲಿ ಗೋವಾ ಮಾದರಿಯ ಜಲಪ್ರವಾಸಕ್ಕೆ 15 ಕೋಟಿ ರೂ. ಅನುದಾನ ದೊರೆತಿದೆ. ಹಲಕುರ್ಕಿಯಲ್ಲಿ ಟೆಕ್ಸಟೈಲ್ ಉದ್ಯಮ ಸ್ಥಾಪಿಸಲು 500 ಕೋಟಿ ರೂ. ಬಂಡವಾಳ ಹೂಡಿಲು ಉದ್ಯಮಿಗಳ ಒಪ್ಪಿದ್ದು, ಇದರಿಂದ 10 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಹೀಗೆ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಹರವಿದ ಸಚಿವರು, ಗ್ರಾಮ ವಾಸ್ತವ್ಯ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದರು