ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಬೇಕು ಸ್ವಂತ ಸೂರು

11-Saunshi-1
Published on

ಎಂ.ಎಸ್. ಹಿರೇಮಠ ಸಂಶಿ

ಸರ್ಕಾರವು ದಿನಕ್ಕೊಂದು ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಅವುಗಳನ್ನು ಸಮರ್ಪಕವಾಗಿ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡವಿಲ್ಲ. ಇದಕ್ಕೆ ಸಾಕ್ಷಿ ಸಂಶಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ.

ಸಂಶಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದರಿಂದ 6 ವರ್ಷಗಳಿಂದ ಗ್ರಾಮದ ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಸದ್ಯ ಕಾರ್ಯನಿರ್ವಹಿಸುತ್ತಿರುವ ಕಟ್ಟಡದಲ್ಲಿಯೂ ಸೂಕ್ತ ಭದ್ರತೆ ಇಲ್ಲ. ದಾಖಲೆಗಳನ್ನು ಸಂಗ್ರಹಿಸಿಡುವುದೇ ಸಿಬ್ಬಂದಿಗೆ ಸವಾಲಾಗಿದೆ.

ಸಾರ್ವಜನಿಕರು ಜನನ, ಮರಣ ನೋಂದಣಿ, ಮರಣ ಪ್ರಮಾಣಪತ್ರ, ವಾರಸಾ ಪ್ರಮಾಣಪತ್ರ, ಪಹಣಿ ಪತ್ರಿಕೆ, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ದೊರೆಯುವ ವಿವಿಧ ಮಾಸಾಶನಗಳ ಮಂಜೂರಾತಿ, ಮತ್ತಿತರ ಸೇವೆ ಪಡೆಯಲು ಇಲ್ಲಿಗೆ ಬರುತ್ತಾರೆ. ಈ ಕಚೇರಿ ಇಕ್ಕಟ್ಟಾಗಿದ್ದರಿಂದ ಹೊರಗಡೆ ನಿಂತುಕೊಂಡೇ ಕೆಲಸ ನಿಭಾಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಸೂಕ್ತ ಆಸನಗಳ ವ್ಯವಸ್ಥೆ ಇಲ್ಲ. ವಯಸ್ಕರರು ಗಂಟೆಗಟ್ಟಲೇ ಬಿಸಿಲಿನಲ್ಲಿ ನಿಂತು ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಆದರೆ, ವೃದ್ಧರ ಪಾಡು ಹೇಳತೀರದು. ಇನ್ನು ಶೌಚಗೃಹ ಇಲ್ಲದ್ದರಿಂದ ಕಚೇರಿ ಹಿಂದುಗಡೆ ಇಲ್ಲವೇ ಗೋಡೆಗಳ ಮರೆಗೆ ಮೂತ್ರ ವಿಸರ್ಜನೆ ಮಾಡುವ ಪರಿಸ್ಥಿತಿ ಇದೆ.

ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹದ ಕಟ್ಟಡದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕಿಟಕಿಗಳ ಸ್ಥಿತಿ ಅಯೋಮಯವಾಗಿವೆ. ಮೇಲ್ಛಾವಣಿಯ ಸಿಮೆಂಟ್ ಆಗಾಗ ಉದುರುತ್ತಿದೆ. ಅದರಲ್ಲೇ ಕೆಲಸ ಮಾಡುವುದು ಅಧಿಕಾರಿಗಳಿಗೆ ಅನಿವಾರ್ಯವಾಗಿದೆ.

ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ: ಈ ಕಚೇರಿ ಸಿಬ್ಬಂದಿಗೆ ಕಾರ್ಯನಿರ್ವಹಿಸಲು ತಕ್ಕಮಟ್ಟಿಗೆ ಅನುಕೂಲವಿದೆ. ಆದರೆ, ಜನರು ಬಂದಾಗ ಜಾಗದ ಇಕ್ಕಟ್ಟಿನಿಂದ ತೊಂದರೆಯಾಗುತ್ತದೆ. ಹೊಸ ಕಟ್ಟಡ ನಿರ್ವಿುಸುವಂತೆ ತಾಲೂಕು ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ವರದಿ ಸಲ್ಲಿಸಲಾಗಿದೆ. ಹೊಸ ಕಟ್ಟಡ ನಿರ್ವಿುಸಿದರೆ ಆಡಳಿತಾತ್ಮಕ ದೃಷ್ಟಿಯಿಂದ ಸಿಬ್ಬಂದಿ, ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಂಶಿ ಗ್ರಾಮ ಲೆಕ್ಕಾಧಿಕಾರಿ ಶಿವಾನಂದ ಕರಿಗೇರ.

ಸಂಶಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಈ ಕಚೇರಿಗೆ ಹೊಸ ಕಟ್ಟಡ ನಿರ್ವಣದ ಕುರಿತಾಗಿ ಸರ್ಕಾರದಿಂದ ಯಾವುದೇ ಪ್ರಸ್ತಾವನೆ ಬಂದಿಲ್ಲ. |ಬಸವರಾಜ ಮೆಳವಂಕಿ ತಹಸೀಲ್ದಾರ್, ಕುಂದಗೋಳ

ಗ್ರಾಮ ಚಾವಡಿ ಹೊಸ ಕಟ್ಟಡ ನಿರ್ವಣದ ವಿಚಾರ ನನೆಗುದಿಗೆ ಬಿದ್ದು ಹಲವು ವರ್ಷಗಳು ಕಳೆದಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ಸರ್ಕಾರ ಸೂಕ್ತ ಅನುದಾನ ಬಿಡುಗಡೆ ಮಾಡಿ ಹೊಸ ಕಟ್ಟಡ ನಿರ್ವಣಕ್ಕೆ ಮುಂದಾಗಬೇಕು. | ಎನ್.ಎನ್. ಪಾಟೀಲ ಜಿಪಂ ಸದಸ್ಯ, ಸಂಶಿ

ಸೂಕ್ತ ಕಟ್ಟಡದ ಕೊರತೆಯಿಂದ ಸಂಶಿ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ ಹಲವು ವರ್ಷಗಳಿಂದ ಹಳೇ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಕ್ಕಟ್ಟಾದ ಜಾಗ, ಮೂಲಸೌಕರ್ಯಗಳು ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಹೊಸ ಕಟ್ಟಡ ನಿರ್ವಿುಸಲು ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. | ಡಿ.ಬಿ. ಪಾಟೀಲ ಮಾಜಿ ಅಧ್ಯಕ್ಷ, ರೈತ ಸಂಘ, ಸಂಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net