ಗ್ರಾಮ ಪಂಚಾಯಿತಿ ಸದಸ್ಯರಿಗೆ ಸಿಗದ ಸಭಾಭತ್ಯೆ

24
Published on

ಪ್ರತಿ ಸಭೆಗೆ 350 ರೂ. ಸಿಟ್ಟಿಂಗ್​ ಅಲೋಯನ್ಸ್​ ಜಿಪಂ ಸಿಇಒ ಪ್ರಭುಗೆ ಮನವಿ

ವಿಶೇಷ ವರದಿ ತುಮಕೂರು

ಕಳೆದ ನಾಲ್ಕೂವರೆ ವರ್ಷಗಳಿಂದ ಈವರೆಗೆ ಜಿಲ್ಲೆಯನ್ನು ಗ್ರಾಪಂ ಸದಸ್ಯರ ಸಭಾಭತ್ಯೆಯನ್ನು ನೀಡದೇ ಇರುವುದು ಬೆಳಕಿಗೆ ಬಂದಿದೆ. ಪ್ರಸ್ತುತ ಮಾರ್ಚ್​ನಿಂದ ಗ್ರಾಮ ಪಂಚಾಯಿತಿ ಸದಸ್ಯರ ಸಭಾಭತ್ಯೆಯನ್ನು 350 ರೂಪಾಯಿಗೆ ಹೆಚ್ಚಿಸಲಾಗಿದೆಯಾದರೂ ಸಭೆಗೆ ಹಾಜರಾಗುವ ಸದಸ್ಯರಿಗೆ ಭತ್ಯೆ ನೀಡುವ ಅರಿವು ಕೂಡ ಕೆಲ ಸದಸ್ಯರಿಗಿದ್ದಂತೆ ಕಾಣುತ್ತಿಲ್ಲ.

ಜಿಲ್ಲೆಯ 330 ಗ್ರಾಪಂಗಳಲ್ಲಿ 5200 ಗ್ರಾಪಂ ಸದಸ್ಯರಿದ್ದು ಕಳೆದ ನಾಲ್ಕೂವರೆ ವರ್ಷಗಳಿಂದ ಶೇ.99 ಸದಸ್ಯರಿಗೆ ಉಪವೇಶನ (ಸಿಟ್ಟಿಂಗ್​ ಅಲೋಯನ್ಸ್​) ನೀಡಿಲ್ಲ. ಪ್ರತಿ ಸದಸ್ಯನಿಗೆ 15 ಸಾವಿರದಷ್ಟು ಸಭಾಭತ್ಯೆಯನ್ನು ಗ್ರಾಪಂಗಳು ಭರಿಸಬೇಕಾಗಿದೆ. ಗ್ರಾಪಂಗಳು ಸ್ವಂತ ಸಂಪನ್ಮೂಲಗಳಿಂದ ಸಭಾಭತ್ಯೇನಿಡಬೇಕಿದ್ದು ಆರ್ಥಿಕ ಹೊರೆ ಬೀಳಲಿದೆ.

100 ರೂ.ನಿಂದ 350 ರೂಪಾಯಿಗೆ ಹೆಚ್ಚಳ: ರಾಜ್ಯದ ಎಲ್ಲ ಗ್ರಾಪಂಗಳ ಚುನಾಯಿತ ಪ್ರತಿನಿಧಿಗಳಿಗೆ ಸಭೆಯೊಂದಕ್ಕೆ 100 ರೂ. ಉಪವೇಶನ ಶುಲ್ಕವನ್ನು 2021ರಿಂದ 2022ರವರೆಗೆ ನೀಡಲಾಗುತ್ತಿತ್ತು. ಬಳಿಕ ಜನಪ್ರತಿನಿಧಿಗಳ ಒತ್ತಾಯದ ಮೇರೆಗೆ 2023ರಿಂದ ಸಭಾಭತ್ಯೆಯನ್ನು 300 ರೂಪಾಯಿಗೆ ಹೆಚ್ಚಳ ಮಾಡಲಾಯಿತು. ಕಳೆದ ಮಾರ್ಚ್​ನಿಂದ 350 ರೂ.ಗೆ ಹೆಚ್ಚಿಸಲಾಗಿದೆ. ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಗ್ರಾಪಂಗಳಲ್ಲಿ ಮಾತ್ರ ಸಭಾಭತ್ಯೆಯನ್ನು ಸದಸ್ಯರಿಗೆ ನೀಡಲಾಗಿದೆ. ಬಹುತೇಕ ಕಡೆ ಸಿಟ್ಟಿಂಗ್​ ಅಲೋಯನ್ಸ್​ ಇದೆ ಎಂಬ ಮಾಹಿತಿಯೂ ಸದಸ್ಯರಿಗಿಲ್ಲ. ಸದಸ್ಯರಿಗೆ ಅರ್ಹವಾಗಿ ಸಿಗಬೇಕಾದ ಸವಲತ್ತಿನ ಬಗ್ಗೆ ಪಿಡಿಒಗಳು ಚಕಾರವೆತ್ತದೆ ಮೌನವಹಿಸಿರುವುದು ಬಹುತೇಕ ಕಡೆ ನಡೆದಿದೆ. ಸ್ವಂತ ಸಂಪನ್ಮೂಲಗಳಿಂದ ಈ ಭತ್ಯೆಯನ್ನು ಭರಿಸಬೇಕಿರುವುದರಿಂದ ಗ್ರಾಪಂಗಳು ನುಣುಚಿಕೊಳ್ಳುತ್ತಿವೆ. ವರ್ಗ1 ರ ಅಡಿಯಲ್ಲಿ ಸಭಾಭತ್ಯೆ ಬಿಡುಗಡೆಗೊಳಿಸುವಂತೆ ಗ್ರಾಪಂ ಸದಸ್ಯರ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ

ವಿಜಯಕುಮಾರ್​ ದೊಡ್ಡೇರಿ ಒತ್ತಾಯಿಸಿದ್ದಾರೆ.

ಹಣ ಬಿಡುಗಡೆಗೆ ಒತ್ತಾಯ: ನಾಲ್ಕೂವರೆ ವರ್ಷಗಳಿಂದ ಸಭಾಭತ್ಯೆ ನೀಡಿಲ್ಲ. ಹಾಗಾಗಿ, ಗ್ರಾಪಂ ಸದಸ್ಯರ ಮಹಾಒಕ್ಕೂಟದ ಜಿಲ್ಲಾಧ್ಯಕ್ಷ ವಿಜಯಕುಮಾರ್​ ದೊಡ್ಡೇರಿ ನೇತೃತ್ವದಲ್ಲಿ ಜಿಪಂ ಸಿಇಒ ಜಿ.ಪ್ರಭು ಅವರನ್ನು ಭೇಟಿ ಮಾಡಿದ ನಿಯೋಗವು ವರ್ಗ1ರ ಅಡಿಯಲ್ಲಿ ಬಾಕಿ ಇರುವ ಸಭಾಭತ್ಯೆಯನ್ನು ಬಿಡುಗಡೆಗೊಳಿಸುಲು ಪಿಡಿಒಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net