

ಸಾಗರ: ಗ್ರಾಮಪಂಚಾಯಿತಿ ಚುನಾವಣೆ ಎದುರಿಸಲು ಬಿಜೆಪಿ ಸರ್ವಸನ್ನದ್ಧವಾಗಿದೆ. ಜಿಲ್ಲೆಯ 270 ಗ್ರಾಪಂಗಳ ಪೈಕಿ 200ಕ್ಕೂ ಕಡೆ ಗೆಲುವು ಸಾಧಿಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ 2,958 ಸದಸ್ಯರ ಪೈಕಿ 2 ಸಾವಿರ ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣೆಯಲ್ಲಿ ಗೆಲ್ಲುವುದು ಖಚಿತ ಎಂದರು.
ಜಿಲ್ಲೆಯ 9 ಮಂಡಲಗಳಲ್ಲಿ ವಾರ್ರೂಮ್ ಸ್ಥಾಪಿಸಲಾಗಿದೆ. ಪ್ರತಿ ವಾರ್ರೂಮ್ಲ್ಲೂ ಮತದಾರರ ಪಟ್ಟಿ, ಮೀಸಲಾತಿ ವಿವರ ಇರುತ್ತದೆ. ಪ್ರತಿ ಗ್ರಾಪಂನಲ್ಲೂ ಪಂಚರತ್ನ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ವರ್ಗ, ಮಹಿಳಾ ಪ್ರಮುಖರು, ಸಾಮಾನ್ಯ ವರ್ಗಕ್ಕೆ ಸೇರಿದ ಐವರು ಇರುತ್ತಾರೆ. ಈ ತಂಡ ಆಯಾ ಗ್ರಾಪಂ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಕೆ.ಆರ್.ಗಣೇಶಪ್ರಸಾದ್, ಜಿಲ್ಲಾ ಉಪಾಧ್ಯಕ್ಷ ಗಂಗಾಧರ್, ಗ್ರಾಮಾಂತರ ಪ್ರಮುಖ್ ಉಪೇಂದ್ರಕುಮಾರ್, ಪ್ರಮುಖರಾದ ವಿ.ಮಹೇಶ್, ಮಂಜುನಾಥ್, ಪ್ರಸನ್ನ ಕೆರೆಕೈ, ಬಿ.ಟಿ.ರವೀಂದ್ರ, ಅರುಣ ಕುಗ್ವೆ, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಎಸ್.ಗೌತಮ್ ಇತರರಿದ್ದರು.