

ಚಿಕ್ಕಬಳ್ಳಾಪುರ: ಮುಂಬರುವ ರಾಜ್ಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ 120 ಸ್ಥಾನಗಳನ್ನು ಗೆಲ್ಲುವ ಗುರಿ ಸಾಧಿಸುವ ಹಿನ್ನೆಲೆಯಲ್ಲಿ ಗ್ರಾಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಪಂಚಸೂತ್ರ, ಪಂಚರತ್ನ ಮತ್ತು ಕುಟುಂಬ ಸಮಾವೇಶ ಕೈಗೊಳ್ಳುತ್ತಿದ್ದು ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದು ನಗರದ ಸಿದ್ದೇಶ್ವರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಾಗಲೇ ಉಡುಪಿ, ಮಂಗಳೂರು ಸೇರಿ ವಿವಿಧೆಡೆ ಗ್ರಾಮ ಸ್ವರಾಜ್ ಸಮಾವೇಶ ಕೈಗೊಳ್ಳಲಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲೂ ಕಾರ್ಯಕ್ರಮಗಳ ಮೂಲಕ ಪಕ್ಷ ಪ್ರಬಲವಾಗಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಗ್ರಾಪಂಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕೆಂಬ ಗುರಿ ಹೊಂದಲಾಗಿದೆ. ಇದಕ್ಕಾಗಿ ಕಾರ್ಯಕರ್ತರು ನಾಯಕರಾಗಿ ಶ್ರಮಿಸಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಕರೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರವು ಗ್ರಾಮ ಸ್ವರಾಜ್ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಿದೆ. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದು ಗ್ರಾಪಂಗೆ 1 ರಿಂದ 2 ಕೋಟಿ ರೂ. ಬಿಡುಗಡೆ ಮಾಡಿದೆ. ಮನೆ ಮತ್ತು ಶೌಚಗೃಹ ನಿರ್ಮಾಣ, ನರೇಗಾದಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ನೆರವು, ಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾಗೊಳಿಸುವಿಕೆ ಸೇರಿ ಹಲವು ಸವಲತ್ತುಗಳ ಮೂಲಕ ಗ್ರಾಮಗಳ ಕಲ್ಯಾಣಕ್ಕೆ ಶ್ರಮಿಸಲಾಗುತ್ತಿದೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ಎನ್.ಮುನಿಸ್ವಾಮಿ, ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರಾಮಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಲಕ್ಷ್ಮೀನಾರಾಯಣ ಗುಪ್ತ, ಅಗಲಗುರ್ಕಿ ಚಂದ್ರಶೇಖರ್ ಮತ್ತಿತರರು ಇದ್ದರು.
ಲೇಪಾಕ್ಷಿಯಿಂದ ಜಿಲ್ಲೆಗೆ ನೀರು: ಹಿಂದುಳಿದ ಭಾಗದ ಜಿಲ್ಲೆಯ ಹಣೆಪಟ್ಟಿಯಿಂದ ಚಿಕ್ಕಬಳ್ಳಾಪುರ ಹೊರಬರಬೇಕು. ಈಗಾಗಲೇ ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರಾಗಿದ್ದು ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಆಂಧ್ರದ ಲೇಪಾಕ್ಷಿಗೆ ಕೃಷ್ಣಾ ನದಿಯ ನೀರಾವರಿ ಸೌಲಭ್ಯ ಸಿಕ್ಕಿದ್ದು, ಇದನ್ನೇ ಜಿಲ್ಲೆಗೆ ವಿಸ್ತರಿಸಿ ನೀರಾವರಿ ದೊರಕಿಸಿಕೊಡಲು ಸರ್ಕಾರ ಮುಂದಾಗಿದೆ ಎಂದು ಸಂಸದೆ ಶೋಭಾ ತಿಳಿಸಿದರು.