

ತುಮಕೂರು: ರಾಜ್ಯ ಸರ್ಕಾರ ಇನ್ನು ಕೆಲವೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಜಿಲ್ಲೆಯಲ್ಲಿ ಗ್ರಾಪಂ ಸದಸ್ಯ ಸ್ಥಾನಕ್ಕೆ ಮೀಸಲಾತಿ ಹಂಚಿಕೆ ಪ್ರಕ್ರಿಯೆ ಕಡೆಯ ಹಂತ ತಲುಪಿದ್ದು, ಅಧಿಸೂಚನೆಗೆ ದಿನಗಣನೆ ಆರಂಭವಾಗಿದೆ. ಬಹುತೇಕ ಕಡೆಗಳಲ್ಲಿ ಮೀಸಲಾತಿಯೇ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವುದರಿಂದ ಬಯಸಿದ ಮೀಸಲಾತಿಗಾಗಿ ತಾವು ನಂಬಿದ ನಾಯಕನ ಮನೆ ಮುಂದೆ ನಿಂತಿದ್ದಾರೆ.
ಜಿಲ್ಲೆಯಲ್ಲಿ 2574 ಗ್ರಾಮಗಳಿದ್ದು 330 ಗ್ರಾಪಂಗಳಿವೆ. ಪ್ರಸ್ತುತ ಎಲ್ಲ ಗ್ರಾಪಂಗಳ ಆಡಳಿತಾವಧಿ ಪೂರ್ಣವಾಗಿದ್ದು, ಎಲ್ಲೆಡೆಯೂ ಆಡಳಿತಾಧಿಕಾರಿಗಳನ್ನು ನೇಮಿಸಿದ್ದು, ಆಡಳಿತದಲ್ಲಿ ಜನರ ಭಾಗವಹಿಸುವಿಕೆ ಇಲ್ಲವಾಗಿದೆ. ರಾಜಕೀಯ ನಾಯಕತ್ವ ಬೆಳೆಸಿಕೊಳ್ಳಲು ಗ್ರಾಪಂ ಚುನಾವಣೆ ಮೊದಲ ಮೆಟ್ಟಿಲಾಗಿದ್ದು, ಇತ್ತೀಚೆಗೆ ರಾಜಕೀಯದ ರುಚಿ ಕಂಡಿರುವ ಯುವಕರೂ ಸೇರಿ ಹಿರಿಯ ತಲೆಗಳು ಗ್ರಾಪಂ ಚುನಾವಣೆಗೆ ಸ್ಫರ್ಧಿಸುವ ಆಕಾಂಕ್ಷೆಯಿಂದ ಮೀಸಲಾತಿ ನಿರೀಕ್ಷೆಯಲ್ಲಿದ್ದಾರೆ.
ಮೀಸಲಾತಿಗೆ ರಾಜಕೀಯ ಪ್ರಭಾವ?: ಸದಸ್ಯ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗುತ್ತಿರುವ ವಿಷಯ ತಿಳಿದ ಗ್ರಾಮದ ಆಕಾಂಕ್ಷಿಗಳು ರಾಜಕೀಯ ಮುಖಂಡರ ಮೂಲಕ ಜಿಲ್ಲಾಡಳಿತ ಮೇಲೆ ಪ್ರಭಾವ ತರಲಾರಂಭಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರದಲ್ಲಿರುವವರ ಪ್ರಭಾವದ ನಡುವೆಯೂ ಸಂವಿಧಾನದ ಮೀಸಲಾತಿ ಪಾಲಿಸಲು ಜಿಲ್ಲಾಡಳಿತ ಕಳೆದೊಂದು ವಾರದಿಂದ ಮೀಸಲಾತಿ ನಿಗದಿ ಸರ್ಕಸ್ ನಡೆಸುತ್ತಿದ್ದು, ಈ ವಾರದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಸಾಮಾನ್ಯ ಸ್ಥಾನ ಅಭಾದಿತ?: ಸದಸ್ಯ ಒಟ್ಟು ಸ್ಥಾನಗಳಲ್ಲಿ ಶೇ.50 ಸ್ಥಾನಗಳು ಸಾಮಾನ್ಯರಿಗೆ ಹಾಗೂ ಎಲ್ಲ ಮೀಸಲಾತಿಗಳಲ್ಲಿಯೂ ಶೇ.50 ಮಹಿಳೆಯರಿಗೆ ಮೀಸಲಾಗಲಿದ್ದು, ಮಹಿಳೆಯ ಹೆಸರಿನಲ್ಲಿಯೂ ಪತಿರಾಯರ ದರ್ಬಾರು ನಡೆಯಬೇಕಿದೆ.ಎಲ್ಲ ಗ್ರಾಮಗಳಲ್ಲಿ ಸಾಮಾನ್ಯ ಸ್ಥಾನಗಳು ಅಬಾಧಿತವಾಗಿರುವ ಸಾಧ್ಯತೆಗಳಿದ್ದು, ಉಳಿದ ಸ್ಥಾನಗಳು ಬದಲಾಗಲಿವೆ. ಮೀಸಲಾತಿ ಹತ್ತು ವರ್ಷಕ್ಕೆ ಮೀಸಲಿರಲಿದೆ ಎಂಬ ಆಸೆ ಹೊಸ ಸರ್ಕಾರದ ಅಸ್ತಿತ್ವದಿಂದ ನಿರಾಸೆಯಾಗಿದ್ದು, ಹೊಸ ಮೀಸಲಾತಿ ಅನ್ವಯ ರಾಜಕೀಯ ಭವಿಷ್ಯ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಕರೊನಾ ಆತಂಕ ಕಡಿಮೆಯಾದರೆ ಸರ್ಕಾರದ ಘೋಷಣೆಯಂತೆ ಅಕ್ಟೋಬರ್‌ನಲ್ಲಿ ಗ್ರಾಪಂ ಚುನಾವಣೆ ನಡೆಯುವ ಸಾಧ್ಯತೆಯಿದೆ. ಅಧಿಕಾರ ವಿಕೇಂದ್ರಿಕರಣದ ಪ್ರಮುಖ ಭಾಗವಾಗಿರುವ ಗ್ರಾಪಂ ಅಧಿಕಾರ ಜಾಸ್ತಿ ದಿನ ಅಧಿಕಾರಿಗಳ ಕೈಯಲ್ಲಿರುವುದು ಸರಿಯಲ್ಲ. ಜನರ ಪ್ರತಿನಿಧಿಗಳು ಅಧಿಕಾರಕ್ಕೆ ಬಂದರೆ ಜನರ ದನಿಗೆ ಬೆಲೆ ಸಿಗಲಿದೆ. ಕಾಡಶೆಟ್ಟಿಹಳ್ಳಿ ಸತೀಶ್ ಪ್ರಧಾನ ಕಾರ್ಯದರ್ಶಿ, ಪಂಚಾತ್ ರಾಜ್ ಪರಿಷತ್ ಸರ್ಕಾರದ ಸೂಚನೆಯಂತೆ ಚುನಾವಣೆ ನಡೆಯಲಿರುವ ಗ್ರಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ, ನಿಯಮಾನುಸಾರ ಮೀಸಲಾತಿ ಘೋಷಣೆಯಾಗಲಿದ್ದು, ಚುನಾವಣೆ ಆಯೋಗ ಚುನಾವಣೆ ನಡೆಸಲಿದೆ. ಕೆ.ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ