ಗ್ರಾಮ ದೊಡ್ಡದು, ಸಮಸ್ಯೆಗಳೂ ಹೆಚ್ಚುರಸ್ತೆ ಹೊರತುಪಡಿಸಿ ಅಭಿವೃದ್ಧಿ ಮರೀಚಿಕೆ

Published on

ದೊಡ್ಡ ಗ್ರಾಮವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮೋಳೆದೊಡ್ಡಿಯಲ್ಲಿ ಸಮಸ್ಯೆಗಳ ಪಟ್ಟಿಯೂ ದೊಡ್ಡದಿದೆ. ರಸ್ತೆಗಳು ಗುಣಮಟ್ಟದಿಂದ ಕೂಡಿರುವುದು ಬಿಟ್ಟರೆ ಮೂಲಸೌಕರ್ಯ ಮರೀಚಿಕೆಯಾಗಿದೆ. ಗ್ರಾಮದ ಬಹುತೇಕ ಮಂದಿಗೆ ಕೂಲಿ ಮತ್ತು ವ್ಯಾಪಾರವೇ ಜೀವನಾಧಾರವಾಗಿದೆ. ಶಾಲೆ ಅಭಿವೃದ್ಧಿ ಕಂಡಿಲ್ಲ. ನಿವೇಶನ ರಹಿತರು, ಭೂ ರಹಿತರೇ ಹೆಚ್ಚಾಗಿರುವ ಗ್ರಾಮದ ಸಮಸ್ಯೆಯನ್ನು ಚನ್ನಪಟ್ಟಣ ವರದಿಗಾರ ಅಭಿಲಾಷ್ ತಿಟ್ಟಮಾರನಹಳ್ಳಿ ಗ್ರಾಮ ಸಂಚಾರದಲ್ಲಿ ತೆರೆದಿಟ್ಟಿದ್ದಾರೆ.

ಚನ್ನಪಟ್ಟಣ: ನಗರದಿಂದ 5 ಕಿ.ಮೀ. ದೂರದಲ್ಲಿರುವ ನೀಲಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ ಮೋಳೆದೊಡ್ಡಿ (ಸೆಣಬನಹಳ್ಳಿ) ಗ್ರಾಮ. ದೊಡ್ಡ ಗ್ರಾಮವೆಂಬ ಹಣೆಪಟ್ಟಿ ಇದ್ದರೂ ಸಮಸ್ಯೆಗಳ ಪಟ್ಟಿಯೇನು ಕಡಿಮೆಯಿಲ್ಲ. ರಸ್ತೆಗಳು ಕಾಂಕ್ರಿಟ್ ಕಂಡಿವೆ ಎನ್ನುವುದನ್ನು ಬಿಟ್ಟರೆ ಹಲವು ಸಮಸ್ಯೆಗಳು ಗ್ರಾಮವನ್ನು ಹೊದ್ದು ಮಲಗಿವೆ. ಗ್ರಾಮ ವಿಸ್ತಾರವಾಗಿದ್ದು, 3200ಕ್ಕೂ ಹೆಚ್ಚು ಜನಸಂಖ್ಯೆ ಇದೆ. 2000ಕ್ಕೂ ಹೆಚ್ಚು ಮತದಾರರಿದ್ದಾರೆ. 800ಕ್ಕೂ ಹೆಚ್ಚು ಬೆಸ್ತ ಸಮುದಾಯದ ಕುಟುಂಬಗಳಿವೆ.

ಕೂಲಿ, ಬೀದಿ ವ್ಯಾಪಾರವೇ ಆಧಾರ: ಗ್ರಾಮದ ಬಹುತೇಕ ಮಂದಿ ಕೂಲಿ ಹಾಗೂ ವ್ಯಾಪಾರ ಮಾಡುತ್ತಾರೆ. ಇನ್ನೂ ಕೆಲವರು ಗಾರೆ ಕೆಲಸ ಹಾಗೂ ದಿನಗೂಲಿ ಆಶ್ರಯಿಸಿದ್ದರೆ, ವಾಹನಗಳ ಮೂಲಕ ಊರೂರು ಸುತ್ತುತ್ತ ವ್ಯಾಪಾರ ನಡೆಸಿ ಬದುಕಿನ ಬಂಡಿ ಸಾಗಿಸುವವರೂ ಇದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ಈ ಗ್ರಾಮದ ಜನತೆ ಇರುವುದರಲ್ಲೇ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ.

ನಲ್ಲಿ ಸಂಪರ್ಕ ಇಲ್ಲ: ಗ್ರಾಮದ ಮನೆಗಳಿಗೆ ಕೊಳಾಯಿ ಸಂಪರ್ಕವೇ ಇಲ್ಲ. ಬೀದಿಗಳಲ್ಲಿರುವ ನೀರಿನ ತೊಂಬೆಗಳನ್ನೇ ಆಶ್ರಯಿಸಬೇಕಿದೆ. ನೀರಿಗಾಗಿ ತೊಂಬೆಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಇದೆ. ಗ್ರಾಮದ ಮುಖ್ಯರಸ್ತೆ ಡಾಂಬರೀಕರಣವಾಗಿದ್ದು, ಮತ್ತೆ ಕೆಲ ರಸ್ತೆಗಳು ಕಾಂಕ್ರಿಟ್ ಕಂಡಿವೆ. ಇನ್ನೂ ಕೆಲವು ಅಭಿವೃದ್ಧಿಯಾಗಬೇಕಿದೆ. ಚರಂಡಿಗಳೂ ಸಮರ್ಪಕವಾಗಿಲ್ಲ.

ಗುಡಿಸಲು, ಭೂರಹಿತರೇ ಹೆಚ್ಚು: ಗ್ರಾಮದ ಬೀದಿಗಳಲ್ಲಿರುವ ಸಾಲು ಗುಡಿಸಲುಗಳು ಗ್ರಾಮ ಹಿಂದುಳಿದಿರುವುದಕ್ಕೆ ಸಾಕ್ಷಿಯಾಗಿವೆ. 100ಕ್ಕೂ ಹೆಚ್ಚಿನ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. 120ಕ್ಕೂ ಹೆಚ್ಚಿನ ಕುಟುಂಬಗಳು ನಿವೇಶನ ರಹಿತವಾಗಿದ್ದು, ಗ್ರಾಮದ ಶೇ.50 ಮಂದಿ ಭೂರಹಿತರಾಗಿದ್ದರೆ, ಉಳ್ಳವರು ಸಣ್ಣ ಪುಟ್ಟ ಭೂಮಿ ಹೊಂದಿದ್ದಾರೆ.

ಶಾಲೆಯೂ ಇದೆ..., ಸಮಸ್ಯೆಯೂ ಇದೆ

ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ ಶಾಲೆ ನಡೆಯುತ್ತಿದ್ದು, 234 ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ಶಿಕ್ಷಣದ ಮಹತ್ವ ಅರಿತಿರುವ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಉತ್ಸುಕತೆ ತೋರಿಸುತ್ತಿದ್ದಾರೆ. ಆದರೆ, ಶಾಲೆ ಭದ್ರತೆ ಸೇರಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಶಾಲೆಗೆ ಕಾಂಪೌಂಡ್ ಇಲ್ಲ, ಶಾಲೆಗೆ ಸೇರಿರುವ ಜಾಗ ಒತ್ತುವರಿಯಾಗಿದೆ. ಇದಕ್ಕಿಂತ ಪ್ರಮುಖವಾಗಿ ಶಾಲೆಯ ಮೈದಾನದಲ್ಲಿ ಕೊಳಚೆ ನೀರಿನ ದೊಡ್ಡ ಗುಂಡಿ ಇರುವುದು ಪ್ರಮುಖ ಸಮಸ್ಯೆಯಾಗಿದೆ. ಈ ಗುಂಡಿಗೆ ಗ್ರಾಮದ ಚರಂಡಿ ನೀರು ಹರಿಬಿಡಲಾಗಿದೆ. ವಿದ್ಯಾರ್ಥಿಗಳಿಗೆ ಕಲುಷಿತ ನೀರಿನ ವಾಸನೆಯ ಸಮಸ್ಯೆ ಒಂದೆಡೆಯಾದರೆ, ಮಕ್ಕಳು ಆ ಕಡೆ ಹೋಗದಂತೆ ಕಾವಲು ಕಾಯುವ ಪರಿಸ್ಥಿತಿ ಶಿಕ್ಷಕರದ್ದಾಗಿದೆ. ಇದೇ ಆವರಣದಲ್ಲಿ ಎರಡು ಅಂಗನವಾಡಿ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ. ಪ್ರೌಢಶಾಲೆಗೆ ನಗರ ಅಥವಾ ಅಕ್ಕಪಕ್ಕದ ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ ಹಲವು ಮಕ್ಕಳು ಪ್ರಾಥಮಿಕ ಹಂತಕ್ಕೆ ಶಿಕ್ಷಣ ಮೊಟಕುಗೊಳಿಸಿರುವ ಉದಾಹರಣೆ ಸಾಕಷ್ಟಿವೆ.

ಆಟೋಗಳೇ ಆಧಾರ: ಗ್ರಾಮಕ್ಕೆ ಆಟೋಗಳೇ ಪ್ರಮುಖ ಸಂಪರ್ಕ ಸಾಧನವಾಗಿವೆ. ಮೆಣಸಿಗನಹಳ್ಳಿ ವಾರ್ಗದ ಸರ್ಕಾರಿ ಸಾರಿಗೆ ಒಂದೆರಡು ಬಾರಿ ಗ್ರಾಮದಿಂದ ಹಾಯ್ದು ಹೋಗುತ್ತದೆ. ಅದನ್ನು ಬಿಟ್ಟು, ನಗರ ಅಥವಾ ಇನ್ನಿತರ ಕಡೆಗೆ ಸಂಚರಿಸಲು ಗ್ರಾಮಸ್ಥರು ಆಟೋಗಳನ್ನು ಆಶ್ರಯಿಸಬೇಕಿದೆ. ಗ್ರಾಮದಲ್ಲಿ ಹಾಲಿನ ಡೇರಿ, ಪಡಿತರ ವಿತರಣೆ ವ್ಯವಸ್ಥೆ ಇರುವುದು ಕೊಂಚ ನಿರಾಳ ಎನಿಸಿದೆ. ಗ್ರಾಮದಲ್ಲಿ ಆಸ್ಪತ್ರೆ, ಸಮುದಾಯ ಭವನ ಸೇರಿ ಇನ್ನಿತರ ಸೌಲಭ್ಯಗಳಿಲ್ಲ.

ಅಭಿವೃದ್ಧಿ ವಾಡುವ ಮನಸ್ಸಿಲ್ಲವೇ?: ಮೋಳೆದೊಡ್ಡಿ ಗ್ರಾಮ ಅಭಿವೃದ್ಧಿ ವಂಚಿತವಾಗಿರುವುದು ಗ್ರಾಮವನ್ನು ಸುತ್ತಾಡಿದರೆ ಕಾಣುತ್ತದೆ. ತಾಲೂಕನ್ನು ಆಳಿರುವ ಜನಪ್ರತಿನಿಧಿಗಳು ಕೇವಲ ವೋಟ್‌ಗಾಗಿ ಬಳಸಿಕೊಂಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ರಾಜಕೀಯ ಪೈಪೋಟಿಯಲ್ಲಿ ಸಾಕಷ್ಟು ಮುಂದಿದೆ. ಇದುವರೆಗೂ ಗ್ರಾಮಕ್ಕೆ ಯಾರೊಬ್ಬರೂ ದೊಡ್ಡ ಪ್ರವಾಣದ ಕೊಡುಗೆ ನೀಡಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇನ್ನು ಕ್ಷೇತ್ರದ ಶಾಸಕ ಎಚ್.ಡಿ. ಕುವಾರಸ್ವಾಮಿ ಒಮ್ಮೆಯೂ ಗ್ರಾಮಕ್ಕೆ ಭೇಟಿ ಕೊಟ್ಟಿಲ್ಲ ಎನ್ನುವ ಅಸವಾಧಾನ ಗ್ರಾಮಸ್ಥರಲ್ಲಿದೆ.

ಶಿಶುಪಾಲನಾ ಕೇಂದ್ರದಲ್ಲಿ ಪುಟಾಣಿಗಳು: ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳ ಜತೆಗೆ, ಎನ್‌ಜಿಒ ಸಹಭಾಗಿತ್ವದಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಮಕ್ಕಳಿದ್ದು, ಕಾರ್ಮಿಕ ಮಕ್ಕಳ ಅನುಕೂಲಕ್ಕಾಗಿ ಈ ಕೇಂದ್ರ ತೆರೆಯಲಾಗಿದೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೂ ಈ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಕೂಲಿ ಕೆಲಸಕ್ಕೆ ಹೋಗುವ ದಂಪತಿಗೆ ಸಹಕಾರಿಯಾಗಿದೆ. ಆಗಬೇಕಿರುವುದೇನು? * ಗ್ರಾಮದ ಪ್ರತಿ ಮನೆಗೆ ನಳ ಸಂಪರ್ಕ * ಗುಡಿಸಲು ರಹಿತ ಗ್ರಾಮವನ್ನಾಗಿಸುವ ಸಂಕಲ್ಪ * ವಸತಿ ರಹಿತರಿಗೆ ಗ್ರಾಮದ ಬಳಿ ಇರುವ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಂಚಿಕೆ * ಶುದ್ಧ ನೀರಿನ ಟಕ * ಶಾಲೆ ಒತ್ತುವರಿ ಜಾಗ ತೆರವುಗೊಳಿಸಿ ಕಾಂಪೌಂಡ್ ನಿರ್ಮಾಣ * ಶಾಲೆ ಮೈದಾನದಲ್ಲಿನ ಕೊಳಚೆ ಗುಂಡಿ ಮುಚ್ಚುವುದು * ಗ್ರಾಮದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೌಢಶಾಲೆ ನಿರ್ವಾಣ * ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ * ಉತ್ತಮ ಚರಂಡಿ ವ್ಯವಸ್ಥೆ * ಕೂಲಿ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ

ಗ್ರಾಮದಲ್ಲಿ ಈ ಹಿಂದೆ ಸಾಕಷ್ಟು ಸಮಸ್ಯೆಗಳಿದ್ದವು. ನರೇಗಾ ಹಾಗೂ ಇನ್ನಿತರ ಅನುದಾನ ಬಳಸಿಕೊಂಡು ರಸ್ತೆ ಹಾಗೂ ಚರಂಡಿ ನಿರ್ಮಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇದೆ. ಗ್ರಾಮದ ಜನರ ಆರ್ಥಿಕ ಅಭಿವೃದ್ಧಿಯಾಗಬೇಕಿದೆ. ಮೂಲಸೌಕರ್ಯ ಕಲ್ಪಿಸಬೇಕು. ಗ್ರಾಮಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಖುದ್ದು ಆಗಮಿಸಿದರೆ ಗ್ರಾಮದ ಸ್ಥಿತಿಗತಿ ಅರಿವಾಗಲಿದೆ. ಬಿಳಿಯಪ್ಪ, ಗ್ರಾಪಂ ಸದಸ್ಯ ಊರೂರು ಸುತ್ತಿ ಗುಜರಿ ವ್ಯಾಪಾರ ಮಾಡುತ್ತಿದ್ದೇನೆ. ದಿನದ ದುಡಿಮೆಯೇ ನನಗೆ ಆಧಾರ. ಗ್ರಾಮದಲ್ಲಿ ಸ್ವಂತ ನಿವೇಶನವಿಲ್ಲ. ಗುಡಿಸಲಿನಲ್ಲಿ ವಾಸವಾಗಿದ್ದೇವೆ. ಸಂಬಂಧಪಟ್ಟವರು ಸೂರು ಕಲ್ಪಿಸಬೇಕು. ಬೈರೇಶ್, ಗ್ರಾಮದ ವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net