

ಬಾಗಲಕೋಟೆ: ಮೂರು ವರ್ಷಗಳಿಗೊಮ್ಮೆ ನಡೆಯುವ ಬಾಗಲಕೋಟೆ ಗ್ರಾಮದೇವತೆ ಜಾತ್ರಾ ಮಹೋತ್ಸವ ಇಂದಿನಿಂದ ಡಿ.20 ಐದು ದಿನಗಳ ಕಾಲ ಅದ್ದೂರಿಯಿಂದ ನಡೆಯಲಿದೆ.
ಕಿಲ್ಲಾದಲ್ಲಿ ಇರುವ ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ಬೆಳಗ್ಗೆ ೮ ಗಂಟೆಗೆ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಧ್ವಜಾರೋಹಣ ನೆರವೇರಿಸುವರು.
ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಗ್ರಾಮ ದೇವಿಯ ಪೂರ್ಣಕುಂಭದ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯನ್ನು ಶಾಸಕ ಎಚ್.ವೈ.ಮೇಟಿ ಹಾಗೂ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಉದ್ಘಾಟಿಸುವರು.
ಸಂಜೆ ೬ ಗಂಟೆಗೆ ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಬಾಗಲಕೋಟೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಮುರನಾಳ ಮಳೆ ರಾಜೇಂದ್ರ ಮಠದ ಶ್ರೀ ಜಗನ್ನಾಥ ಮಹಾಪುರುಷರು, ನಗರದ ಪಂಡಿತ ಶ್ರೀ ಬಿಂಧುಮಾಧವಾಚಾರ್ಯ ನಾಗಸಂಪಗಿ ಅವರು ಸಾನಿಧ್ಯ ವಹಿಸುವರು.
ಗ್ರಾಮದೇವಿ ಸೇವಾ ಸಮಿತಿ ಗೌರವಾಧ್ಯಕ್ಷ ಬಸವಪ್ರಭು ಸರನಾಡಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸುವರು. ಶಾಸಕ ಎಚ್.ವೈ.ಮೇಟಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿರುವರು.
ವೇದಿಕೆ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕುಂಬಕಾಶಿಯ ಸದ್ಗುರು ಶ್ರೀಧರ ಆಯುರ್ವೇದಾಶ್ರಮದ ಆಚಾರ್ಯ ಡಾ.ಕೆ.ಶ್ರೀಧರದಾಸ ಗುರೂಜಿ ಅವರು ದೇವಿ ಪ್ರವಚನ ನೀಡಲಿದ್ದಾರೆ. ಬಳಿಕ ಜಾನಪದ ಜಾತ್ರೆ ನಡೆಯಲಿದ್ದು, ಜನಪದ ಕಲಾವಿದರಾದ ಮಾಳು ನಿಪನಾಳ, ಲಫಂಗ ರಾಜಾ, ಸೈಫಿ, ರಾಕ್ ಸ್ಟಾರ್ ಜ್ಯೋತಿ, ಬೊಂಬಾಟ್ ಬಸಣ್ಣ, ಆರ್.ಜೆ.ಸರಿತಾ ಅವರು ನಡೆಸಿಕೊಡುವರು.