ಗ್ರಾಮ-ಒನ್‌ನಲ್ಲಿ ಆರೋಗ್ಯ ಕಾರ್ಡ್ ನೀಡಲು ಆದ್ಯತೆ ನೀಡಿ ; ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ನಿರ್ದೇಶನ

14TMK_DC_Meeting
Published on

ತುಮಕೂರು : ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವ ಗ್ರಾಮ-ಒನ್ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್ ನೀಡಲು ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ-ಒನ್ ಯೋಜನೆ ಸಿಎಂ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ನೂರಕ್ಕೂ ಹೆಚ್ಚು ಸರ್ಕಾರಿ ಸೇವೆ ಒಂದೇ ಸೂರಿನಡಿ ಒದಗಿಸಲಾಗುತ್ತಿದೆ ಎಂದರು.

ಸರ್ಕಾರಿ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶ ಹೊಂದಿದ್ದು, ಇದರಿಂದ ಜನರು ಸರ್ಕಾರಿ ಕೆಲಸಗಳಿಗಾಗಿ ನಗರಗಳಿಗೆ ಬಂದು-ಹೋಗುವುದು ತಪ್ಪುತ್ತದೆ. ಎಂದರಲ್ಲದೆ, ತಹಸೀಲ್ದಾರ್, ಟಿಎಚ್‌ಒ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ಸೋಮವಾರ 9 ಮತ್ತು 10ನೇ ತರಗತಿ ಆರಂಭವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಕರೊನಾ ಸೋಂಕು ಕಡಿಮೆಯಾಗುತ್ತಿದ್ದರೂ ಎರಡನೇ ಡೋಸ್ ಲಸಿಕಾಕರಣವು ಶೇ. 91 ಪೂರ್ಣಗೊಂಡಿದೆ, ಬಾಕಿ ಇರುವ ಲಸಿಕಾಕರಣವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

15-18 ವರ್ಷದೊಳಗಿನ ಮಕ್ಕಳಿಗೆ ಕರೊನಾ ಲಸಿಕೆಯ ಮೊದಲನೇ ಡೋಸ್ ಶೇ.75, ಎರಡನೇ ಡೋಸ್ ಶೇ.24 ಪೂರ್ಣಗೊಂಡಿದೆ, ವಿದ್ಯಾರ್ಥಿಗಳ ಮಾಹಿತಿಯನ್ನು ಶಾಲಾ-ಕಾಲೇಜುಗಳಿಂದ ಪಡೆದು ಶೇ.100 ಲಸಿಕಾಕರಣ ಪೂರ್ಣಗೊಳಿಸಬೇಕು ಎಂದರು.

ಶೇ.44 ಬೂಸ್ಟರ್ ಡೋಸ್: ಜಿಲ್ಲೆಯಲ್ಲಿ ಬೂಸ್ಟರ್ ಡೋಸ್ ಲಸಿಕಾಕರಣವು ಶೇ.44 ಆಗಿದ್ದು, ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಿ ಶೇ.100 ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಘನತ್ಯಾಜ್ಯ ವಿಲೇವಾರಿಗಾಗಿ ಸೂಕ್ತ ಸ್ಥಳ ಕಾಯ್ದಿರಿಸುವ ಕುರಿತು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಾಲಿಕೆ ಆಯುಕ್ತೆ ರೇಣುಕಾ, ಡಿಎಚ್‌ಒ ಡಾ.ನಾಗೆಂದ್ರಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‌ದಾಸ್ ಇದ್ದರು.

ಶೀಘ್ರವಾಗಿ ಪೂರ್ಣಗೊಳಿಸಿ : ಸಕಾಲ, ನಾಡಕಚೇರಿ ಪರಿಶೀಲನೆ, ನಮೂನೆ 1-5 ಸಿದ್ಧಪಡಿಸುವ ಪ್ರಗತಿ, ನಮೂನೆ 50-53 ವಿಲೇವಾರಿ ಹಾಗೂ ನಮೂನೆ 57ರ ಗಣಕೀಕರಣ, ಸ್ಮಶಾನ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರಿ ಜಮೀನು ಕಾಯ್ದಿರಿಸುವುದು ಸೇರಿ ವಿವಿಧ ಕೆಲಸಗಳು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಯಲ್ಲಿ ಕರೊನಾಗೆ ಮೃತಪಟ್ಟ 953 ಜನರ ಪೈಕಿ 706 ಮೃತರ ದಾಖಲೆಗಳು ಸ್ವೀಕೃತಗೊಂಡಿವೆ. ಉಳಿದ 247 ಪ್ರಕರಣಗಳಿಗೆ ಸರಿಯಾದ ಮಾಹಿತಿ ನಮೂದಿಸಿ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು. ಕೆ.ಚನ್ನಬಸಪ್ಪ ಅಪರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net