ಗ್ರಾಮ ಒನ್ ನಿರ್ವಹಣೆ ಪಿಕೆಪಿಎಸ್‌ಗೆ ವಹಿಸಿ

11Huk1
ಹುಕ್ಕೇರಿ ಶ್ರೀ ಮಹಾಲಕ್ಷ್ಮೀ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿಯಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಭೀಮಸೇನ ಬಾಗಿ, ಶಿವನಾಯಿಕ ನಾಯಿಕ, ಬೀರಪ್ಪ ಮಾಳಿಂಗೆ, ಎಲ್.ಜಿ.ನಾಯಿಕ, ಸಂಜೀವ ಚಿಕ್ಕೋಡಿ ಇದ್ದರು.
Published on

ಹುಕ್ಕೇರಿ: ರಾಜ್ಯ ಸರ್ಕಾರ ಗ್ರಾಮೀಣ ಜನರಿಗೆ ಸರ್ಕಾರಿ ದಾಖಲೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪ್ರಾರಂಭಿಸಿರುವ‘ಗ್ರಾಮ ಒನ್’ ಕೇಂದ್ರದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವ ಬದಲಾಗಿ ಆಯಾ ಗ್ರಾಮದ ಪಿಕೆಪಿಎಸ್‌ಗೆ ವಹಿಸುವುದು ಸೂಕ್ತ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ಪಟ್ಟಣದ ಶ್ರೀ ಮಹಾಲಕ್ಷ್ಮೀ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿಯಲ್ಲಿ ಶುಕ್ರವಾರ ಇ-ಸ್ಟ್ಯಾಂಪಿಂಗ್ ವಿತರಣೆ ಕೇಂದ್ರ ಉದ್ಘಾಟಿಸಿ, ಸತ್ಕಾರ ಸ್ವೀಕರಿಸಿ ಮಾತನಾಡಿದರು.
ಪಿಕೆಪಿಎಸ್‌ನಲ್ಲಿ ಗಣಕೀಕೃತ ವ್ಯವಸ್ಥೆ ಮತ್ತು ಅನುಭವಿ ಸಿಬ್ಬಂದಿ ಇದ್ದಾರೆ. ಜತೆಗೆ ಗ್ರಾಮೀಣ ಜನರಿಂದ ಜನರಿಗಾಗಿ ಇರುವ ಸಂಸ್ಥೆಗೆ ಹೆಚ್ಚಿನ ಲಾಭವೂ ಆಗುವುದು. ಖಾಸಗಿಯವರಿಗೆ ವಹಿಸಿದಲ್ಲಿ ಅವರು ಮಾಡಿರುವ ಖರ್ಚು-ವೆಚ್ಚ ಸರಿದೂಗಿಸಲು ನಿಗದಿತ ಮೊತ್ತಕ್ಕಿಂತ ಹೆಚ್ಚು ದರ ಪಡೆಯುವ ಸಾಧ್ಯತೆ ಇರುತ್ತದೆ ಎಂದರು.

ರೈತರ ಆರ್ಥಿಕ ಕೇಂದ್ರಗಳಾಗಿರುವ ಪಿಕೆಪಿಎಸ್‌ಗಳಿಗೆ ಗ್ರಾಮಒನ್ ಜವಾಬ್ದಾರಿ ವಹಿಸಿದರೆ ಆರ್ಥಿಕ ಕ್ಷಮತೆ ಹೆಚ್ಚಿಸಿದಂತಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಿ, ನಿರ್ಣಯಿಸಬೇಕು. ಶಾಸಕರು, ಸಚಿವರು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದರು. ಬೆಳವಿ ಸಿದ್ಧಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಸಾರಾಪುರೆ ಅಧ್ಯಕ್ಷತೆ ವಹಿಸಿದ್ದರು. ಹಿರಾ ಶುಗರ್ಸ್‌ ನಿರ್ದೇಶಕರಾದ ಅಶೋಕ ಪಟ್ಟಣಶೆಟ್ಟಿ, ಬಸವರಾಜ ಮರಡಿ, ಸುರೇಶ ದೊಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಬೆಳವಿ ಪಿಕೆಪಿಎಸ್ ಅಧ್ಯಕ್ಷ ಬಾಳಾಸಾಹೇಬ ನಾಯಿಕ, ಗ್ರಾಪಂ ಸದಸ್ಯ ರಾಮಣ್ಣ ತೇರದಾಳಿ, ಗಣ್ಯರಾದ ಮಲ್ಲಪ್ಪ ಬಿಸಿರೊಟ್ಟಿ, ಮಲ್ಲಪ್ಪ ನಾಯಿಕ, ಶಿವನಾಯಿಕ ನಾಯಿಕ, ಬೀರಪ್ಪ ಮಾಳಿಂಗೆ, ಎಲ್.ಜಿ.ನಾಯಿಕ, ಸಂಜೀವ ಚಿಕ್ಕೋಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net